Saturday, December 24, 2011

ನಾನು ಮತ್ತು ನಾನು

ಯಾರಾದರೂ ಆತ್ಮೀಯರು ಸಿಕ್ಕಿದರೆ ಇದನ್ನೆಲ್ಲ ಮಾತಿಗಿಳಿಸಿ ಶೂನ್ಯಕ್ಕೊಂದು ಅರ್ಥ ನೀಡುತ್ತಾ ಈ ಖಾಲೀತನವನ್ನು ತುಂಬಿಬಿಟ್ಟು ಸಮಾಧಾನ ಪಡೆಯಬಹುದಿತ್ತೇನೊ. ಆದರೆ ಇಲ್ಲಿ ಅಂಥ ಆತ್ಮೀಯರು ಸಿಗುವುದಾಗಲೀ, ಸಿಕ್ಕವರ ಆತ್ಮೀಯತೆಯನ್ನು ಸಾಚಾ ಎಂದು ನಂಬುವುದಾಗಲೀ ಇವತ್ತಿನ ಈ ನನಗೆ ಸಾಧ್ಯವಾಗುತ್ತಿಲ್ಲ. ಇದೇ ದೊಡ್ಡ ಸಮಸ್ಯೆಯೇನೂ ಅಲ್ಲ ಎಂಬಂತೆ ಎಲ್ಲವನ್ನೂ ಮರೆಯುತ್ತ ದಿನಗಳನ್ನು ಕಳೆಯುತ್ತಿದ್ದೇನೆ. ಈ ಎಲ್ಲ ಮರೆಯುವುದರಲ್ಲಿನ ಸುಖವನ್ನು ಕಂಡು ಬೆಚ್ಚಿಬಿದ್ದಿದ್ದೇನೆ. 

ವ್ಯಕ್ತಿತ್ವಕ್ಕೆ ಮುಕುರಿಕೊಂಡ ಕೊಳಕೆಲ್ಲವೂ ನನ್ನ ಬಾಸ್‌ನ ಕ್ಯಾಬಿನ್ನಿನೊಂದಿಗೆ ನೆನಪಾಗುತ್ತವೆ. ತನ್ನ ಘನತೆಯನ್ನು ಬೇರೆ ಬೇರೆ ದೃಷ್ಟಿಗಳಿಂದ ಬಿಂಬಿಸಿ, ಹಿಗ್ಗಿಸಿ ಹಿಗ್ಗಿಸಿ ಕೊರೆದು ನನ್ನಿಂದ ಎಸ್ಸ್‌ಸಾ ಎಸ್ಸ್‌ಸಾ ಎನ್ನಿಸಿಕೊಂಡರೂ ಅದೆಲ್ಲ ಸಾಚಾ ಆಗಿರಲಿಕ್ಕಿಲ್ಲ ಎಂಬ ಅತೃಪ್ತಿಯಿಂದ ಬೇಯುತ್ತಲೇ ಇರುವ ನನ್ನ ಬಾಸ್. ಸಂಜೆ ಹೊತ್ತು ಈ ಬಗ್ಗೆ ಯೋಚಿಸುವಾಗ ಆ ಎಸ್ಸ್‌ಸಾ ಎಸ್ಸ್‌ಸಾ ರೂಪಿಸಿರುವ ಈ ನನ್ನ ಬಗ್ಗೆ ವಾಕರಿಕೆ ಹುಟ್ಟುವುದಿತ್ತು. ಆದರೆ ಈಗ ಇದೆಲ್ಲ ನನಗೆ ಸಹಜ ವ್ಯಾಪಾರವಾಗಿ ಬಿಟ್ಟಿದೆ. 

ಹುಟ್ಟುವುದೇ ಶಾಲೆಗೆ ಹೋಗಲಿಕ್ಕೆಂಬ ಹಾಗೆ ಆತಂಕ, ವಿಸ್ಮಯ, ಖುಷಿ ಮತ್ತು ಸ್ವಾತಂತ್ರ್ಯಗಳ ನಕ್ಷತ್ರಲೋಕದಂತಿದ್ದ ಬಾಲ್ಯವನ್ನು ಚೀಲಕ್ಕೆ ಹಾಕಿಕೊಂಡು ಶಾಲೆಗೆ ಹೊರಡುವುದು.... 

ಕಲಿತಿದ್ದೇ ಹಣ ಸಂಪಾದನೆಗೆಂಬಂತೆ ಹೀಗೆ ಮೇಲಿನವರಿಗೆ ಹಲ್ಲುಗಿಂಜಿ ಕೆಳಗಿನವರಿಂದ ಗಿಂಜಿಸಿಕೊಂಡು ಇಸ್ತ್ರಿ ಮಾಡಿದ ಶರಟು ಪ್ಯಾಂಟುಗಳೊಳಗಿನ ಹರಿದ ಕಾಚಾದ ಹಾಗೆ ಆಫೀಸಿನೊಳಗೆ ನಾನು...... 

ಸಂಜೆಯ ಟ್ರಾಫಿಕ್ಕಿನ ಕಪ್ಪು ಹೊಗೆ ಮತ್ತು ಕತ್ತಲಿನಲ್ಲಿ ಮಿಕಿಮಿಕಿ ನೋಡುವ ಕಣ್ಣುಗಳಂಥ ಲೈಟ್ ಹೊತ್ತಿಸಿಕೊಂಡು ಓಡುವ ವಾಹನ ಜಾಲದಲ್ಲಿ ಶಾಶ್ವತವಾಗಿ ಕಳೆದೇ ಹೋಗಬಹುದಾದ ಭಯದ ಆಳದಲ್ಲಿ.... 

ಜಾಗೃತಗೊಳ್ಳುವ ನಾನೆಂಬ ನಾನು....... 


ಇಲ್ಲಿ, ಈ ಏರುತ್ತಿರುವ ರಾತ್ರಿ ಹೊತ್ತು ಗೋಗರೆಯುವ ಸಮುದ್ರದ ಎದುರು ಮರಳ ರಾಶಿಯ ಮೇಲೆ ಸ್ವಚ್ಛಂದ ಸ್ವತಂತ್ರ ಆಸನದಲ್ಲಿ ಬೀಸುವ ಗಾಳಿಗೇ ಶರಣಾದವನಂತೆ ಕೂತಿರಬೇಕಾದರೆ, ಮನಸ್ಸಿನ ಆಗಸದಲ್ಲಿ ಮುಗ್ಧವಾಗಿ ನಗುವ ಬಾಲ್ಯದೊಂದಿಗೆ ನಾನೇ ಪ್ರತ್ಯಕ್ಷನಾಗಿ ಹುಟ್ಟಿಸುವ ಭಾವನೆ ಖೇದ. 

ಆಗ ಇನ್ನೂ ನನ್ನ ಗೊಗ್ಗರು ಹಲ್ಲು ಅಸಹ್ಯವಾಗಿ ಕಾಣಿಸದ ಹಾಗೆ ನಾಟಕೀಯವಾಗಿ ನಗಲು ಬರುತ್ತಿರಲಿಲ್ಲ. ಹಾಗಾಗಿ ಆ ನಗೆ ಮುಗ್ಧ. ಮತ್ತು ಅದರಿಂದಾಗಿಯೇ ಚಂದ. ಈ ಕಾರಣದಿಂದಾಗಿಯೇ ಅದು ಒರಿಜಿನಲ್ ನಾನು. 

ಹೀಗೆ ಒರಿಜಿನಲ್ ನನ್ನನ್ನು ನಾನು ನನ್ನೊಳಗೇ ಜೀವಂತವಾಗಿಸಿಕೊಳ್ಳುತ್ತ ಸಾಗುವ ಹಾದಿಯಲ್ಲಿ ಚಾಣಕ್ಯರನ್ನು, ಶಕುನಿಗಳನ್ನು ಮೀರಿಸಬಲ್ಲ ಎಂಡಿಗಳು, ಜನರಲ್ ಮ್ಯಾನೇಜರ್‌ಗಳು ಇಲ್ಲ. ತಿಂದದ್ದು ಹೇತು ಹೋಗುವ ಮೊದಲು ದಕ್ಕಿಸಬಲ್ಲುದರ ಖರ್ಚು ದಕ್ಕಿದ್ದಕ್ಕಿಂತ ಹೆಚ್ಚೋ ಕಡಿಮೆಯೋ ಎಂದು ಚರ್ಚಿಸುತ್ತ ಕೂರುವ ಪಂಡಿತರಿಲ್ಲ. ಅವರಿವರು ಆಡಿಕೊಂಡಿದ್ದನ್ನು ಆಡಿರದ ಮಾತುಗಳೊಂದಿಗೆ ಸೇರಿಸಿ ಆಡಿ ಮನಶ್ಶಾಂತಿ ಕೆಡಿಸಿ ಖುಷಿ ಪಡುವವರಿಲ್ಲ. ದೇಶದ ಬಗ್ಗೆ ಮಾತನಾಡಿ ಭಯ ಹುಟ್ಟಿಸಬಲ್ಲವರಿಲ್ಲ. ಏರುವ ಇಳಿಯುವ ಏಣಿಗಳಿಲ್ಲ, ಹಣದ ಹಿಂದೆ ಓಡುವ ತುರ್ತಿಲ್ಲ, ಸುಖಕ್ಕೆ ಅಂತಸ್ತಿಲ್ಲ, ಕಾರ್ಯಕ್ಕೆ ಕಾರಣದ ಹಂಗೂ ಇಲ್ಲ. ಅಥವಾ, ಇವೆಲ್ಲವೂ ಇರುತ್ತವೆ, ನಾನೇ ಅಲ್ಲಿ ಇರುವುದಿಲ್ಲವೇನೊ! 

ಒಂದು ದಿನ ನಾನು ಕಾಲೇಜಿನಲ್ಲಿ ಯಾವುದೋ ಭಾಷಣ ಮಾಡುತ್ತಿದ್ದೆ. ಯಾರದೋ ಪ್ರಸಿದ್ಧ ಭಾವಭಂಗಿ, ಅಲ್ಲಿ ಇಲ್ಲಿ ಕದ್ದು ಪೋಣಿಸಿಕೊಂಡಿದ್ದ ನುಡಿಮುತ್ತುಗಳು.....ಸುತ್ತ ನನ್ನ ಅಭಿಮಾನೀ ಸಹಪಾಠಿಗಳು, ಮುಖ್ಯವಾಗಿ ಹುಡುಗಿಯರು. ಆಗ, ಅಚಾನಕವಾಗಿ ಅವನನ್ನು ನೋಡಿದ್ದೆ. ಯಾರೋ ಕೊಳಕು ಹುಡುಗ. ಹೋಟೆಲಿನವನಿರಬೇಕು ಎನಿಸಿತು, ಆಕ್ಷಣಕ್ಕೆ. ಈಗ ಎಲ್ಲ ನೆನಪುಗಳ ಮಹಾಪೂರವೇ ಅಲೆಅಲೆಯಾಗಿ ಪ್ರವಹಿಸುವಂತೆ ಮಾಡುವ ಆ ಹುಡುಗ ಒಳಗೂ ಹೊರಗೂ ಸರಳನಾಗಿದ್ದ. ಗಿಮ್ಮಿಕ್‌ಗಳು, ನಾಟಕೀಯ ಚಲನೆಗಳು ತಿಳಿದಿರದವ. ಬೆಳೆದಂತೆಲ್ಲ ತಾನು ತನ್ನದೇ ಅಂತರಂಗದೊಳಗೆ unfit animal ಆಗಿ ಬೆಳೆಯಬಲ್ಲ ಲಕ್ಷಣಗಳನ್ನು ಆ ಪೆದ್ದು ನಗೆಯಲ್ಲಿ, ಸಂಕೋಚದ ಮುದ್ದೆಯಂತಿದ್ದ ಆ ಮುಖದಲ್ಲಿ, ಕೊರಳಲ್ಲಿದ್ದ ಮಾಸಿದ ಕಾಶೀದಾರದಲ್ಲಿ, ಹಳೆಯ ಅಂಗಿ ಮತ್ತು ಖಾಕಿ ಚಡ್ಡಿಯಲ್ಲಿ ಹಾಗೂ ಆ ಚಡ್ಡಿಯ ಕಾಲುಗಳಿಂದ ಹೊರಬಂದ ಸೊಟ್ಟ ಕಾಲುಗಳನ್ನಿಟ್ಟ ರೀತಿಯಲ್ಲಿ - ಇವನ್ನೆಲ್ಲ ಯಾರಿಗೂ ಗೊತ್ತಾಗದಂತೆ ಅಡಗಿಸಿಟ್ಟುಕೊಳ್ಳಬೇಕು ತನ್ನಲ್ಲೆ ಎಂಬ ನಾಗರಿಕ ಪ್ರಜ್ಞೆಯೇ ಇಲ್ಲದೆ - ಬದಲಾಗಿ ಈ ಬೆದರುಗೊಂಬೆಯ ವೇಷವನ್ನು ಜಗತ್ತಿಗೇ ಸಾರುವವನ ಹಾಗೆ ಎಲ್ಲರಿಗಿಂತ ಮುಂದೆ ನಿಂತು ನನ್ನನ್ನೇ ನೋಡುತ್ತ ನಗುತ್ತಿದ್ದ, ಗೊಗ್ಗರು ಹಲ್ಲುಗಳನ್ನು ತೋರಿಸುತ್ತ. ಕೊನೆಗೂ ಆ ಹುಲ್ಲುಗಳನ್ನೇ ನೋಡುತ್ತ ಮಾತು ಮುಂದುವರಿಸಿದ್ದ ನನಗೆ ಹೊಳೆಯಿತು, ಆ ಹುಡುಗ ನಾನೇ ಆಗಿದ್ದೆ! 

ಎಂಥ ಆಘಾತ! ಫಕ್ಕನೆ ಎಚ್ಚರವಾಗಿತ್ತು ನನಗೆ. ಆಗಿನ್ನೂ ಮುಂಜಾವದ ನಾಲ್ಕುಗಂಟೆ. ನನ್ನೊಳಗೇ ನಾನು ಭಾಷಣ ಮಾಡಿಕೊಳ್ಳುತ್ತ ಬೆಳೆಸಿಕೊಂಡಿದ್ದ ಢಾಂಬಿಕತೆಯನ್ನು ಇದಕ್ಕಿಂತ ತೀಕ್ಷ್ಣವಾಗಿ ವಿಡಂಬಿಸಬಲ್ಲ ಇನ್ನೊಂದು ಪ್ರತಿಮೆ ಸಾಧ್ಯವಿಲ್ಲದ ಹಾಗೆ ಕನಸು ನನ್ನನ್ನು ಕಂಡು ಕೇಕೇ ಹಾಕಿ ನಕ್ಕಿರಬಹುದು. ನನಗೆ ತುಂಬ ಅವಮಾನವಾಗಿತ್ತು. ಆನಂತರ ನಾನು ಭಾಷಣ ಮಾಡುವುದನ್ನು ಬಿಟ್ಟುಬಿಟ್ಟೆ. 

ಮೇಲಾಗಿ, ಆನಂತರದ ದಿನಗಳಲ್ಲಿ ಆ ಹುಡುಗ ನನ್ನನ್ನು ಬಿಡಲಿಲ್ಲ. ಆಗಾಗ ನಾನೇ ಅವನನ್ನು ಭೇಟಿ ಮಾಡುವುದು ಸುರುವಾಯ್ತು. ಹೀಗೆ ಕಡಲಿನ ಎದುರು ದಟ್ಟವಾಗುತ್ತ ಹೋಗುವ ಕತ್ತಲೆಯಲ್ಲಿ, ಸಮುದ್ರದ ನೀರು ಕೂಡಾ ಕಪ್ಪಾಗುತ್ತ ನಿಗೂಢತೆಯನ್ನು ಒಳಗೂ ಹೊರಗೂ ಉಕ್ಕಿಸತೊಡಗುವಾಗ ನಾನು ನನ್ನ ಗರ್ಭದೊಳಗೆ ಬೆಳೆಯತೊಡಗುತ್ತಿದ್ದೆ. ಅಲ್ಲಿ ಆ ವಿಚಿತ್ರ ಸನ್ನಿವೇಶದಲ್ಲಿ, ಕೈಯಲ್ಲಿ ಸಿಗರೇಟ್ ಇಲ್ಲದಿದ್ದರೂ ಇದ್ದ ಹಾಗೆ. ಬಿಯರ್ ಕುಡಿಯುತ್ತಿರುವ ಹಾಗೆ, ಗುಟುಕು ಗುಟುಕಾಗಿ...... ಏನೋ ಆತಂಕ, ಭಯ, ಆಳದಲ್ಲಿ ತಮ್ಮಟೆ ಬಡಿಯುತ್ತಿರುವ ಹಾಗೆ.... 

ಹೆಚ್ಚಾಗಿ ಅವನು ಊರಿನ ಕಸದ ಹೊಂಡದಲ್ಲಿ ಖಾಲಿ ಸಿಗರೇಟು ಪ್ಯಾಕೆಟ್‌ಗಳನ್ನೋ, ತಿಂದೆಸೆದ ಚಾಕಲೇಟಿನ ರಾಪರುಗಳನ್ನೋ ಆರಿಸುತ್ತಾ ಇರುತ್ತಿದ್ದ. ಈಗಲೂ ನನಗೆ ಬೀಡ ಜಗಿದು ಉಗಿದ ಹೊಗೆಸೊಪ್ಪು, ಬೀಡಿ ಸಿಗರೇಟುಗಳ ತುಂಡು, ಎಸೆದ ಮೊಟ್ಟೆಗಳು, ಸತ್ತ ಇಲಿ, ನಾಯಿ ಬೆಕ್ಕುಗಳ ಅರೆಬರೆ ದೇಹ, ಹಾಳಾಗಿ ಎಸೆದ ಅನ್ನ, ಸಾಂಬಾರು ಇವನ್ನೆಲ್ಲ ಅರೆಬರೆ ಸುಡಲು ಪ್ರಯತ್ನಿಸುತ್ತಿದ್ದ ಬೆಂಕಿಯ ಹೊಗೆಯ ಘಾಟು ವಾಸನೆ ಮೂಗಿನಲ್ಲೆ ಎಲ್ಲೊ ದಾಸ್ತಾನು ನಿಂತ ಹಾಗಿದೆ. ಆ ಹೊಂಡದ ಬೆಂಕಿಯಲ್ಲಿ ನಮ್ಮೂರ ಸಿನೆಮಾ ಟಾಕೀಸಿನ ಕಟ್ ಆದ ಫಿಲಂ ರೀಲುಗಳ ಆಸೆಯಿಂದ ಕಾಲಿಕ್ಕಿ ಸುಟ್ಟುಕೊಂಡ ನೆನಪಿದೆ. ಆ ನೆನಪಿನಿಂದ ಎಷ್ಟೋ ಸಾರಿ ಅಪ್ರಯತ್ನ ಕೈ ಕಾಲಿನತ್ತ ಸರಿಯುವುದೂ ಕಾಲಿನ ಶೂ ನನ್ನನ್ನು ಒಮ್ಮೆಗೇ ಎತ್ತಿ ತಂದು ಈಚೆಯ ಜಗತ್ತಿಗೆ ಎಸೆಯುವುದೂ ನಡೆದಿದೆ. ಕಾಲೇಜು ಮೆಟ್ಟಿಲು ಹತ್ತುವವರೆಗೂ ಕಾಲಿಗೆ ಚಪ್ಪಲಿ ಕೂಡಾ ಇರಲಿಲ್ಲ ನನಗೆ. 

ಒಂದೊಂದು ಸಲ ಅವನು ಊರ ಬೀದಿಯ ಎಡಕ್ಕೆ ಸಾಲಾಗಿ ಬೆಳೆದ ಹೆಬ್ಬಲಸಿನ ಮರಗಳ ನೆರಳಿನಲ್ಲಿ ಸಾಮಾನು ತರುವ ಚೀಲ ಹಿಡಿದುಕೊಂಡು ಹೋಗುತ್ತಿರುತ್ತಾನೆ. ಆಗ ಅವನು ಏನನ್ನು ಯೋಚಿಸುತ್ತಿರುತ್ತಾನೋ! ಹುಚ್ಚು ಹಿಡಿದು ಊರಿಡೀ ಸುತ್ತುತ್ತಿರುವ ತನ್ನ ಅಕ್ಕನ ಬಗ್ಗೆ ಇರಬಹುದು. ಯಾಕೆಂದರೆ ಅವಳೇ ಆ ಬೀದಿಯಲ್ಲಿ ಅವನಿಗೆದುರಾಗಿ ಸಿಕ್ಕುವುದಿತ್ತು. ಅಥವಾ ಸೂಳೆಯರ ಹಾಸಿಗೆಯಲ್ಲಿ ಕುಡಿಯುತ್ತಾ ಒರಗಿಕೊಂಡಿರಬಹುದಾದ ತನ್ನ ಅಪ್ಪನ ಬಗ್ಗೆ ಇರಬಹುದು. ಬೀದಿಯಲ್ಲಿ ಸರಕಾರೀ ಕೆಂಪು ಬಸ್ಸು ಓಡಿದಾಗೆಲ್ಲ ಅದರ ಡ್ರೈವರ್ ತನ್ನಪ್ಪನೇ ಇರಬಹುದೆ ಎಂಬ ಆಸೆ, ಕಾತರ ಆ ಮುಖದಲ್ಲಿ ಯಾರಿಗಾದರೂ ಕಾಣುವಂತಿದೆ. ಅಥವಾ ಅಮ್ಮನ ಟಿ.ಬಿ. ಅವಳನ್ನು ತಮ್ಮ ಪಾಲಿಗೆ ಉಳಿಸಬಹುದೇ ಎಂಬ ಚಿಂತೆಯಲ್ಲೋ, ತನ್ನ ಮನೆಯವರ ಅಸಹಾಯಕ ಸ್ಥಿತಿಯ ಲಾಭ ಎತ್ತುತ್ತಿರುವ ಊರ ಕೊಳಕು ಗಂಡಸರ ಬಗ್ಗೆಯೋ, ಇಂಥ ಕೊಳಕಿನಲ್ಲಿ ಬಲಿಯಾಗುತ್ತಿರುವ ಅಕ್ಕಂದಿರ ಬಗ್ಗೆಯೋ ಯೋಚಿಸುತ್ತಾ ಮುದುಕನಾಗುತ್ತಿರುವ ಹಾಗೆ ಕಾಣಿಸಿಕೊಳ್ಳುತ್ತಾನೆ. ರಾತ್ರಿ ಹಾಸಿಗೆಯಲ್ಲಿ ಎಲ್ಲರೂ ಮಲಗಿದ ಮೇಲೆ, ಕತ್ತಲಿನಲ್ಲಿ ತನ್ನ ಅಮ್ಮ ಏನಾದರೂ ಸತ್ತೇ ಹೋದರೆ ಎಂದು ಯೋಚಿಸಿದ್ದೇ ಬಿಕ್ಕಿ ಬಿಕ್ಕಿ ಅತ್ತು ದಿಂಬು ತೋಯಿಸುತ್ತಿದ್ದ ನೆನಪುಗಳೊಂದಿಗೆ ಅವನು ಪ್ರತ್ಯಕ್ಷನಾದಾಗ ಕರುಳು ಮಗುಚಿದಂತಾಗುತ್ತದೆ. ಕಳೆದುಕೊಂಡಿದ್ದು ಕಳೆದುಕೊಳ್ಳಲೇ ಬೇಕಾದುದನ್ನೆ ಅಥವಾ..... 

ಸಂಬಂಧಿಗಳಿಗೆ ಬೇಡದವರಾಗಿ, ಜಾತಿಗೆ ಬಹಿಷ್ಕೃತರಾಗಿ, ಊರಿನ ಅವಕಾಶವಾದಿಗಳಿಗೆಲ್ಲ ಬಲಿಯಾಗುವ ಸಂದರ್ಭದಿಂದ ಯಥಾನುಶಕ್ತಿ ತಪ್ಪಿಸಿಕೊಳ್ಳುತ್ತಾ ಸವೆಸಿದ ಹೇಡಿ ಬದುಕಿನಲ್ಲಿ ಪ್ರೀತಿಸಬಲ್ಲ ಸಾಧ್ಯತೆ ಕೂಡ ಇದ್ದಿದ್ದೇ ಆಗಿನ ನನ್ನ ಚೇತನ-ಶಕ್ತಿ ಆಗಿತ್ತೆ? 

ತಾನು ಮಾಡಿದ ಸಹಾಯಕ್ಕೆ ಪ್ರಾಯಶ್ಚಿತ್ತವಾಗಿ ನನ್ನ ಹೆಸರಿನಲ್ಲಿ ಸ್ವ-ಉದ್ಯೋಗದ ಹೆಸರಿನಲ್ಲಿ ಐವತ್ತು ಸಾವಿರ ಸಾಲ ತೆಗೆದು ಶಾಲೆಯ ಸರ್ಟಿಫಿಕೇಟುಗಳಿಗೆ ಸೀಲು ಹಾಕಿಸಿ ಮನೆಯಿಂದ ಹೊರದಬ್ಬಿದ ಮಾವನಿಗೆ ಸೆಡ್ದು ಹೊಡೆದು ನಿಂತ ಮೇಲೆ ಆ ಪ್ರಶ್ನೆ ಎದ್ದಿತು. ಅದೇ ಮೊದಲಿಗೆ ಎದ್ದ ಪ್ರಶ್ನೆ ಇರಲಾರದು. 

ಈ ಜೀವನದಲ್ಲಿ ಬದುಕಿನಲ್ಲಿ ನಮಗೆ ಬದುಕಬೇಕು, ಏನನ್ನಾದರೂ ಸಾಧಿಸಬೇಕು ಎಂದೆಲ್ಲ ಅನಿಸುವಂತೆ ಮಾಡುವ, ತೊಡಗಿಸುವ, ಉತ್ಸಾಹ ಸ್ಫೂರ್ತಿ ತುಂಬುವ, ಕ್ರಿಯಾಶೀಲತೆಯನ್ನು ಉಂಟು ಮಾಡಿ ಜೀವವಿರೋಧಿ ಮತ್ತು ಜೀವನ ವಿಮುಖೀ ಧೋರಣೆಗಳಿಂದ ದೂರವಿರಿಸಬಲ್ಲ ವಸ್ತು ಅಥವಾ ಸಂಗತಿ ಯಾವುದು? ಯಾಕೆ ಬದುಕಬೇಕೆಂದು ನನಗನ್ನಿಸುತ್ತಿರುವ ಈ ಘಳಿಗೆಯಲ್ಲೇ ನನ್ನ ಗೆಳೆಯರು, ಸಂಬಂಧಿಕರು, ಅವರಿವರು ಧೀಗುಟ್ಟುತ್ತ ಹಣದ ಬೆನ್ನು ಹಿಡಿದು ಓಡುತ್ತಿದ್ದಾರೆ. ನನ್ನ ಇರುವಿಕೆಯನ್ನು ಕೂಡಾ ಲಕ್ಷ್ಯಕ್ಕೆ ತೆಗೆದುಕೊಳ್ಳದು ಹಾಗೆ ಈ ಜಗತ್ತಿಗೆ ಜಗತ್ತೇ ಚಲಿಸುತ್ತಿರುವಾಗ ನಾನೊಬ್ಬ ನಿಂತಲ್ಲೇ ಒಳಗೊಳಗೇ ಇಳಿಯುತ್ತಾ ನಾಶವಾಗುವ ಬಗ್ಗೆ ಯೋಚಿಸುತ್ತಿರುವುದು ಎಂಥ ವಿಚಿತ್ರ! 

ನನ್ನಂಥ ಮತ್ತಷ್ಟು ಮಂದಿ ಇರಬಹುದಾದರೂ ನಾವುಗಳೆಲ್ಲರೂ ಒಂಟಿಯಾಗಿಯೇ ನಿಂತು ಕೇಳಿಕೊಳ್ಳುತ್ತಿರುವ ಪ್ರಶ್ನೆ ಉಳಿದವರಿಗೆಂದೂ ಎದುರಾಗದೇ ಹೋದದ್ದು ಮತ್ತು ನಮಗೇ ಎದುರಾದದ್ದು ಒಳ್ಳೆಯದಕ್ಕೊ ಕೆಟ್ಟದ್ದಕ್ಕೋ ಅರಿಯಲಾರದ ಆ ಸ್ಥಿತಿಯಲ್ಲಿ ಆ ಪ್ರಶ್ನೆಯನ್ನು ಬದಿಗೆ ಸರಿಸಿ ಬದುಕುವ ಸಾಧ್ಯತೆ ಇದ್ದಾಗ್ಯೂ ಚಲನೆಯನ್ನು ಇಚ್ಛಿಸುವ ಸ್ಥಿತಿಗೆ ನಾನು ತಯಾರಾಗಲಿಲ್ಲ. ನನ್ನೊಳಗೇ ಇಳಿಯುವುದು ಹೆಚ್ಚು ಸುಖಕರವಾಗಿತ್ತು. 

ನಿರುಪಯೋಗಿ ಜೀವಿಯಾಗಿ ಪರಾನ್ನ ತಿನ್ನುತ್ತ ಒಂದು ಉದ್ಯೋಗಕ್ಕಾಗಿ ಶ್ರೀಮಂತರ ಬಂಗಲೆಗಳ ಕೋಟೆಗಳಂಥ ಕಾಂಪೌಂಡಿನ ಭಾರೀ ಗೇಟುಗಳನ್ನು ತೆಗೆದೂ ಹಾಕಿ, ಘೂರ್ಕನಿಗೆ, ನಾಯಿಗಳಿಗೆ, ಒಳಗಿನ ಮಹಾ ವ್ಯಕ್ತಿಯ ಜಬರ್ದಸ್ತಿಗೆ ಹೆದರಿ ಹೆದರಿ ಕುಬ್ಜನಾಗುತ್ತಾ; ಇಂಥ ಪ್ರತಿ ಭೇಟಿಯ ನಂತರವೂ ವಾಪಾಸಾಗುವ ಹಾದಿಯಲ್ಲಿ, ಮನೆಯೊಳಗೆ ಹಾದಿ ಕಾಯುತ್ತ ಕೂತ ಮುದುಕಿ ಅಮ್ಮನ ಬಳಿ, ಮುದುಕಿಯಾಗುತ್ತಿರುವ ಅಕ್ಕನ ಬಳಿ ಎಂಥ ಕತೆಕಟ್ಟಿ ಹೇಳಲಿ ಎಂದು ಯೋಚಿಸುತ್ತಾ ನನ್ನ ಕಲ್ಪನೆಗಳೆಲ್ಲ ಸುಡುಸುಡು ಬಿಸಿಲಿಗೆ ಕರ್ರಗೆ ಕರಗುತ್ತಾ ಹೋಗುವುದನ್ನು ನೋಡುವುದು ನನ್ನ ಹೆಣವನ್ನು ನಾನೇ ಕಂಡಂತೆ. ‘ನೋಡೋಣ’ ಎಂದರು, ‘ಮಾಡೋಣ’ ಎಂದರುಗಳಂಥ ಸುಳ್ಳುಗಳನ್ನು ಕ್ರಮೇಣ ಸ್ವತಃ ನಾನೂ ನಿಜವೆಂದೇ ನಂಬುತ್ತ ದಿನಗಳನ್ನು ನಿಜಕ್ಕೂ ದೂಡುತ್ತಲೋ ದಬ್ಬುತ್ತಲೋ ಇದ್ದಾಗ ಬದುಕುವಂತೆ ಪ್ರೇರೇಪಿಸಬಲ್ಲ ಯಾವುದೂ ಇರಲಿಲ್ಲ. ಆಗ ಡಾಯರಿ ತುಂಬ ನಾನು ಅಕ್ಷರಗಳ ರೂಪಕ್ಕಿಳಿದೆ. ನನ್ನ ಕನ್ನಡ ಭಾಷೆ ಚೆನ್ನಾಗಿತ್ತಂತೆ. ಕನ್ನಡ ಲೆಕ್ಚರರ್ ಹೇಳಿದ್ದರು. ಸಂದರ್ಶನಕ್ಕೆ ಕರೆದಿದ್ದ ಯಾವುದೋ ಪತ್ರಿಕೆಯ ಸಂಪಾದಕನೂ ಹೇಳಿದ್ದ. ಆದರೆ ಕೆಲಸ ಕೊಟ್ಟಿರಲಿಲ್ಲ. 

ಒಂದು ಘಟನೆ; ಅದು ಘಟಿಸಿದ ಕಾಲ; ಆ ಕಾಲದ ಸ್ಥಿತಿ, ಪರಿಸರ, ಸ್ಥಳ ತಾಪಮಾನ; ಅದರ ಪರಿಣಾಮ; ಎಲ್ಲ ಆ ಕ್ಷಣದ ಮನಸ್ಥಿತಿ. 

ಎಲ್ಲವುಗಳ ಅಥವಾ ಇಲ್ಲಿ ಬಿಟ್ಟು ಹೋದ ಇನ್ನೂ ಕೆಲವು ವಿಶಿಷ್ಟ ಸಂಗತಿಗಳ ಸಮಷ್ಟಿ ಘನೀಕರಿಸಿ ಕೊಟ್ಟ - ಕೊಡುವ ಫಲ. ಪ್ರತಿಯೊಂದೂ ಚರ. ಯಾವುದೂ ಈಗಿದ್ದಂತೆ ಇನ್ನೊಂದು ಕ್ಷಣದಲ್ಲಿ ಇರುವುದಿಲ್ಲ. ಯಾವ ನಿರ್ದಿಷ್ಟ ಕ್ಷಣವನ್ನೂ ಯಾವ ನಿರ್ದಿಷ್ಟ ಮನಸ್ಥಿತಿಗೆ ಮರು ಹೊಂದಿಸಲಾರ ಮನುಷ್ಯ. ಈ ಕ್ಷಣ ನಾನು ಏನನ್ನೋ ಕಳಕೊಂಡ ಸಂಕಟದಲ್ಲಿ, ಅದನ್ನು ಶಬ್ದಗಳಿಗೆ ಇಳಿಸಲಾರದ ಚಡಪಡಿಕೆಯಲ್ಲಿ ನರಳುತ್ತಿರುವಾಗ ಇದಕ್ಕೆಲ್ಲ ಮೂಲವಾದ ವಸ್ತುವೋ, ವ್ಯಕ್ತಿಯೋ ಬೇರೆಯೇ ಸಂಭವನೀಯ ಸಮಷ್ಟಿ ಘನೀಕರಿಸಿಕೊಟ್ಟ ಅವಸ್ಥೆಯಲ್ಲಿ ಇರುತ್ತದೆ ಮತ್ತು vice versa. ವಿಚಿತ್ರವಾದ, ಸ್ಥಿರವೆನ್ನಿಸಿಯೂ ಅಸ್ಥಿರವಾದ ಈ ಮನಸ್ಸೆಂಬ ವಿಪರೀತವನ್ನು ಮನುಷ್ಯ ಹೊರಬೇಕಾಗಿ ಬಂದಿದೆಯಲ್ಲಾ ಎಂದು ವ್ಯಥೆಯಾಗುತ್ತದೆ. 

ಯಾವ ಪ್ರೀತಿ, ಆತ್ಮೀಯತೆ ಇತ್ಯಾದಿಗಳೂ ಶಾಶ್ವತವಲ್ಲ, ಅನುಪಮವಲ್ಲ, ನಿಸ್ಸಾರ್ಥವಲ್ಲ, ಸ್ಥಿರವಲ್ಲ ಎಂದು ತಿಳಿದೂ ತಿಳಿದೂ ಪ್ರತಿಯೊಬ್ಬರೂ ಒಂದಿಷ್ಟು ಪ್ರೀತಿಗಾಗಿ ಸ್ನೇಹಕ್ಕಾಗಿ ಬಾಯ್ದೆರೆದು ಬಾನತ್ತ ಆರ್ತವಾಗಿ ಮೊರೆಯಿಡುತ್ತಲೇ ಅಂಥದ್ದೇನೂ ಇಲ್ಲವೇ ಇಲ್ಲ ಎಂಬಂತೆ ಗರಿಗರಿ ಬಟ್ಟೆಯೊಳಗೆ, ನಾಗರಿಕ ವೇಷಭೂಷಣಗಳೊಂದಿಗೆ ಹಣದ ಹಿಂದೆ ಓಡುತ್ತೇವೆ. ಅತೃಪ್ತಿಯಲ್ಲಿ ಬೇಯುತ್ತಾ ನರಳುತ್ತಾ ಇಲ್ಲೆಲ್ಲೊ ನಿರ್ದಿಷ್ಟು ಶ್ರುತಿಗೆ ಸಿಕ್ಕಲಾರದೆ ಕೈ ತಪ್ಪುತ್ತಿರುವ ಹಾಡಿನಲ್ಲಿ ಕಳೆದು ಹೋದ ಏನನ್ನೋ ಕಂಡಂತಾಗಿ ಅಂತರ್ ಪಿಶಾಚಿಗಳಾಗುತ್ತೇವೆ. 

ಎಲ್ಲರೂ......... 

ಸತ್ಯ, ಸೌಂದರ್ಯ ಮತ್ತು ನ್ಯಾಯವನ್ನು ನಮ್ಮೊಳಗಲ್ಲದೆ ಹೊರಗೆ ಅರಸಬಾರದಂತೆ. ಪ್ರೇಮವನ್ನು ಇಲ್ಲಿ ಸೇರಿಸಲು ಆ ಮಹಾವ್ಯಕ್ತಿ ಮರೆತಿರಬೇಕು. 

ಹೀಗೆಲ್ಲ ನನ್ನನ್ನು ನಾನು ಸರಿಯಾಗಿ ಕಂಡುಕೊಳ್ಳುವ ತೆವಲು ಹತ್ತಿ ಬರೆಯುತ್ತ ಹೋದಂತೆಲ್ಲ ಒಂದು ಹಂತದಲ್ಲಿ ಒಂದು ಅನುಮಾನ ಎದ್ದುದಕ್ಕಾಗಿ ಡಾಯರಿ ಬರೆಯುವುದನ್ನು ನಿಲ್ಲಿಸಿದೆ. ಆ ಅನುಮಾನ; ಬರೆದದ್ದೆಲ್ಲ ನಾನಾಗಿದ್ದೇನೆಯೆ ಅಥವಾ ನಾನು ಏನಾಗಿದ್ದೇನೋ ಅದನ್ನೆ ಬರೆದಿದ್ದೇನೆಯೆ ಎಂಬುದು. 

ಬರೆಯುತ್ತ ಸಾಗಿದಂತೆಲ್ಲ ನನಗೆ ನಾನು ಪ್ರೀತಿಸಿದ್ದೇನೆಂದು ಅನ್ನಿಸಿದ್ದ ರಜನಿಯನ್ನು ಪ್ರೀತಿಸಿದ್ದ ಬಗ್ಗೆಯೇ ಅನುಮಾನಗಳೆದ್ದೆದ್ದಿವು. ಮನಸ್ಸಿಗೇ ತೆಗೆದುಕೊಂಡಿದ್ದ ಯಾರು ಯಾರನ್ನೋ ಬಹಳವಾಗಿ ಹಚ್ಚಿಕೊಂಡಿದ್ದ ಅರಿವಾಗಿತ್ತು. ರಜನಿ ಎಂದುಕೊಂಡು ಪ್ರೀತಿಸಿದ್ದು ರಜನಿಯನ್ನೆ ಅಥವಾ ಭಾವನಾಳನ್ನೆ ಎಂಬ ಗೊಂದಲವಿತ್ತು. ಚಂದ ಎನಿಸಿದವರು, ನನಗೇ ಬೇಕು ಎನಿಸಿದವರು, ಸ್ಪಂದಿಸಿದವರು, ಆಟವಾಡಿದವರು ಎಲ್ಲರ ಪಟ್ಟಿ ಉದ್ದವಾದಾಗ ನಾನು ಲಂಪಟನಿರಬಹುದೆ ಎಂಬ ಅನುಮಾನ.  

ಭಾವನಾಳನ್ನು ಪ್ರೀತಿಸಲು ಆಯ್ದುಕೊಂಡಿದ್ದು ಹೈಸ್ಕೂಲಿನಲ್ಲಿ. ಗೆಳೆಯರೆಲ್ಲ ಒಬ್ಬೊಬ್ಬರನ್ನು ಆಯ್ದುಕೊಂಡು ಖುಷಿಪಡುತ್ತಿದ್ದಾಗ, ನಾನು ತಡ ಮಾಡಿದರೆ ಬೇರೆ ಯಾರಾದರೂ ಭಾವನಾಳನ್ನೆ ಆರಿಸಬಹುದಾದ ಭಯಕ್ಕೆ. ನಮ್ಮದೇ ಜಾತಿಯ ಭಾವನಾ ಅದೇ ಕಾರಣಕ್ಕಾಗಿ, ಜಾತಿಯಿಂದ ತಿರಸ್ಕೃತರಾದ ನಮಗೆ ಹೇಳಿಸಿದವಳಲ್ಲ ಎಂಬುದು ಅರ್ಥವಾಗಲು ಹೆಚ್ಚು ಕಾಲ ಹಿಡಿಯಲಿಲ್ಲ. ಅಕ್ಕಂದಿರ ಹೆಸರು ಬೇರೆ ಕೀಳು ಜಾತಿಯ ಹುಡುಗರ ಹೆಸರಿನೊಂದಿಗೆ ಊರಿಡೀ ಗುಲ್ಲಾಗುತ್ತಿದ್ದ ದಿನಗಳು. ಯಾರೊಬ್ಬಳೂ ಮದುವೆಯ ಮಟ್ಟಕ್ಕೆ ಮುಟ್ಟುವ ದಿನವೂ ದೂರವಿರಲಿಲ್ಲ. ಮನೆಯಲ್ಲಿ ನಿರಂತರ ಗೌಜಿ-ಬೊಬ್ಬೆ-ಬೈಗುಳಗಳು. ಅಳು, ನಿತ್ಯ ರಂಪಾಟ. ಬಿಗುಮಾನದ ಸುಂದರಿ ಭಾವನಾ ದಿನದಿನವೂ ದೂರ ದೂರ. ಸಾಲದೆಂಬಂತೆ ಅವರು ಸಿರಿವಂತಿಕೆಯ ಮೆಟ್ಟಿಲೇರತೊಡಗಿದರು. 

ನನ್ನ ಮಗಳನ್ನು ಮದುವೆಯಾಗ್ತೀಯ ಎಂದು ಭಾವನಾಳ ಅಮ್ಮ ಕೀಟಲೆ ಮಾಡುತ್ತಿದ್ದ ಪ್ರಶ್ನೆಯ ನೆನಪುಗಳು ನನ್ನಲ್ಲಿ ಗಾಢವಾಗ ತೊಡಗಿದ ಹಾಗೆ ಭಾವನಾಗೂ ಅನಿಸುವ ಹಾಗಿದ್ದರೆ.....ನನ್ನ ಮನದಂಗಳದ ಪ್ರೀತಿಯ ಹೂವುಗಳೆಲ್ಲ ಬಿಸಿಲಿನಲ್ಲಿ ಬಾಡುತ್ತ ಸಂಜೆಯ ತನಕ ಕಾದೇ ಉಳಿದವು ಒಣಗಿ. 

SHE IS GOING ಎಂದಷ್ಟೇ ಬರೆದು ಯಾರೋ ಹತ್ತಿರದವರು ಸತ್ತ ಹಾಗೆ ಸೂತಕದ ಕಳೆ ಹೊತ್ತು ನನ್ನ ಬೇಯುತ್ತಿದ್ದ ಹೃದಯದೊಂದಿಗೆ ಈ ಕಡಲಿನ ಎದುರು ಬಿದ್ದುಕೊಂಡಿದ್ದೆ ಆವತ್ತು. ಭಾವನಾಳ ಮದುವೆಯ ವಾರ್ತೆ ಕಿವಿಗೆ ಬಿದ್ದ ದಿನ. 

ರಜನಿ ಇಷ್ಟವಾದದ್ದು ಅವಳು ಭಾವನಾಳನ್ನೇ ಹೋಲುತ್ತಾಳೆಂಬ ಕಾರಣಕ್ಕೆ. ಮುಂದೊಂದು ದಿನ ತಿಳಿದುಹೋಗಿತ್ತು. ನನ್ನೊಳಗಿನ ಭಾವನಾಳಾಗಲೀ, ರಜನಿಯಾಗಲೀ ವಾಸ್ತವದ ರಜನಿಯೋ ಭಾವನಾಳೋ ಆಗಿರುವ ಸಾಧ್ಯತೆಯಿಲ್ಲ - ಎಂಬ ಸತ್ಯ. ನನ್ನ ಇಷ್ಟ, ಅಗತ್ಯ ಗುಣಗಳನ್ನೆಲ್ಲ ಆರೋಪಿಸಿ ಮನಸ್ಸೇ ನಿರ್ಮಿಸಿಕೊಂಡ ಯಾವ ಹೆಣ್ಣೂ ಈ ಜಗದ ಮಣ್ಣಿನ ಸೃಷ್ಟಿಯೂ ಆಗುವ ಸಾಧ್ಯತೆ ಇಲ್ಲ. ಎಲ್ಲ ಭಾವನೆಗಳೂ ಭ್ರಮೆಗಳು. 

ನಿನ್ನ ಸುಂದರ ಕಪ್ಪು ಕಂಗಳಲ್ಲಿ ನನ್ನ ನಾ ಕಂಡ ದಿನವೇ ನನ್ನ ಪುಟ್ಟ ಹೂವಂಥ ಹೃದಯದಲ್ಲಿ ನಿನ್ನ ನಾ ಕಂಡುಕೊಂಡಿದ್ದು ನನ್ನದೇ ತಪ್ಪು, ಕ್ಷಮಿಸಿಬಿಡು ಗೆಳತಿ ಎಂದು ಮುಂದೊಂದು ದಿನ ನಾನು ಬರೆದುಕೊಂಡು ಪಟ್ಟ ಸಮಾಧಾನ ಬಹುಶಃ ರಜನಿಯನ್ನೇ ಮದುವೆಯಾಗಿದ್ದರೂ ದಕ್ಕುತ್ತಿತ್ತೋ ಇಲ್ಲವೋ! ನನ್ನನ್ನು ರಜನಿಯ ಹಾಗೆ ನೋಡಬಲ್ಲ ಒಂದು ಹೆಣ್ಣು ಜೀವ ಈ ಭೂಮಿಯ ಮೇಲಿರಬಹುದೆಂಬ ಭರವಸೆಯನ್ನೇ ಕಳೆದುಕೊಂಡಿದ್ದ ಕಾಲಕ್ಕೆ ಹಾಗೆ ಮರೆಯಿಂದ ಓರೆಯಾಗಿ ತುಂಟಿಯ ಹಾಗೆ ಮಿಂಚು ಹರಿಸಿದ ರಜನಿ.....ಅವಳ ತುಂಬು ಕಣ್ಣುಗಳು.... 

ನಾನೊಬ್ಬ ಫೂಲ್ ಎಂಬಂತೆ ತಣ್ಣಗೆ ಮದುವೆಯಾಗಿ ಹೋದ ರಜನಿ ನನ್ನೊಳಗಿನಿಂದ ಇನ್ನೂ ಹೊರಟು ಹೋಗದಿರಲು ಬರಿಯ ನಾನೇ ಕಾರಣವಿರಲಿಕ್ಕಿಲ್ಲ. ಆರು ವರ್ಷಗಳ ನಂತರ ಅನಿರೀಕ್ಷಿತವಾಗಿ ನನ್ನ ಬಳಿಗೇ ಟ್ರೈನಿಂಗ್‌ಗೆ ಎಂದು ಬಂದಿದ್ದ ರಜನಿಯ ತಮ್ಮ ಕಿರಣ ಹೇಳಿದ ಸಂಗತಿಗಳು ಅವಳನ್ನು ಇಂದಿಗೂ ನನ್ನೊಳಗೆ ಜೀವಂತವಾಗಿರಿಸಿದ ಮೂಲ ದ್ರವ್ಯ ಇರಬಹುದೆ? ಅಡಿಗರ ಕವನ ನೆನಪಾಗುತ್ತದೆ... 

ಮುಗಿಲಲಿ ಮೂಡಿದ 
ಒಲವಿನ ಕನಸು 
ಮನಸಿಗಿಳಿಯದಲ್ಲ 
ಇಳಿದರು 
ನನಸನಾಳದಲ್ಲ... 

ಹಣದ ಹಿಂದೆ ಹೂಡಿದ ಓಟದಲ್ಲಿ ನಾನೂ ಸೇರಿಕೊಂಡಿದ್ದು ತುಂಬ ತಡವಾಗಿ. ಒಮ್ಮೆ ಓಡತೊಡಗಿದ್ದೇ ಎಲ್ಲ ಮರೆಯತೊಡಗಿದೆ ಅಥವಾ ನನ್ನ ಪ್ರಯತ್ನವಿಲ್ಲದೆಯೇ ಎಲ್ಲ ಮರೆತು ಹೋಯಿತೋ... ಮೊದಲ ಮೂರೋ ನಾಲ್ಕೋ ವರ್ಷಗಳ ಕಾಲ ನಾನೆಷ್ಟು ಪ್ರಾಮಾಣಿಕ, ದಕ್ಷ ಇತ್ಯಾದಿಗಳೆಲ್ಲ ಆಗಿದ್ದೆ! ನಂತರ ಸುರುವಾಯಿತು ಹಣ ಮಾಡುವ ಚಾಲಾಕಿ ಅಥವಾ ಹಠ? 

ಹೌದು, ಹಠವೇ. 

ನನ್ನ ಸೋಲಿಗೆ ಕಾರಣವಾಗಿದ್ದೇ ಹಣದ ಬಗ್ಗೆ ನನಗಿದ್ದ ತಿರಸ್ಕಾರ. ಅಲ್ಪ ತೃಪ್ತಿ. ಇಲ್ಲಿ ಪ್ರೀತಿ ಕೂಡ ದುಡ್ದು ಕೊಟ್ಟು ಕೊಂಡುಕೊಳ್ಳಬೇಕಾದ ಸಂಗತಿ. ಇಲ್ಲದಿದ್ದರೆ ಮದುವೆಯಾಗಿ ಏಳು ವರ್ಷ ಕಾಲ ಜೊತೆಯಾಗಿ ಸಂಸಾರ ನಡೆಸಿದ್ದ ಅಕ್ಕನಿಗೆ ಭಾವ ವ್ಯವಹಾರದಲ್ಲಿ ಸೋತು ಸಾಲದಲ್ಲಿ ಮುಳುಗತೊಡಗಿದ ಕೂಡಲೇ ಕೀಳು ಜಾತಿಯವನು ಅನಿಸತೊಡಗಿತೇಕೆ? ಅದೇ ಒಂದು ಜಗಳವಾಗಿ ಭಾವ ಅನಿಸಿಕೊಂಡವನು ಆತ್ಮಹತ್ಯೆ ಮಾಡಿಕೊಂಡನಲ್ಲ. ಪ್ರೇಮ ವಿವಾಹದ ತೀವ್ರತೆ, ಪ್ರೀತಿ ಪ್ರೇಮಗಳೆಂಬ ಭ್ರಮೆ ಕೂಡಾ ಹಣದ್ದು. ಹಣವಿಲ್ಲದಿದ್ದರೆ ಹೆತ್ತ ತಾಯಿಗೂ ಮಗನೆಂದರೆ ತಿರಸ್ಕಾರ ಹುಟ್ಟುತ್ತದೆ. ಹಣವುಳ್ಳವನ ಹಾದಿ ಆದರ್ಶವಾಗುತ್ತದೆ. ತಲೆ ಒಡೆದು ಕೊಲೆ ಮಾಡಿಯೂ ನನ್ನ ಮನಸ್ಸು ನನ್ನನ್ನು ಪ್ರಶ್ನಿಸದೇ ಸುಖವಾಗಿರಲು ಒಗ್ಗಿಕೊಳ್ಳಬಲ್ಲುದಾದರೆ ಅದೇ ಮೌಲ್ಯ, ಧರ್ಮ. ನಾನೀಗ ಒಗ್ಗಿಕೊಂಡಿಲ್ಲವೆ? 

ನಾನು ಸುಖವಾಗಿದ್ದೇನೆಯೆ? ದ್ವಂದ್ವಗಳನ್ನು ಮೀರಿ ನಿಂತಿದ್ದೇನೆಯೆ? ಅಥವಾ ಕೇವಲ ಪ್ರಜ್ಞೆಯಿಂದ ದೂರವೇ ಉಳಿಯುವುದರಲ್ಲಿ, ಸಿಗರೇಟು ಮದ್ಯಗಳಲ್ಲಿ ನನ್ನನ್ನೇ ಕಳೆದುಕೊಳ್ಳುತ್ತ ಸುಖವನ್ನು ಭ್ರಮಿಸುತ್ತಿದ್ದೇನೆಯೆ? ಚಿಕ್ಕಪ್ಪನ ಮಗ ಹೇಳುತ್ತಿದ್ದನಲ್ಲ, ತಾನು ದುಡಿದದ್ದನ್ನು ತಾನು ತಿನ್ನುವುದಕ್ಕೂ ಯೋಗ ಬೇಕು ಅಂತ? ನನ್ನ ಭ್ರಷ್ಟತೆಯ ಬಗ್ಗೆ ಇವತ್ತು ಯಾರೂ ಆಡುವುದಿಲ್ಲ. ಎಲ್ಲರೂ ನನ್ನನ್ನು ಸ್ವೀಕರಿಸಿದ್ದಾರೆ. ನನ್ನ ಹೆಂಡತಿ ಮಕ್ಕಳನ್ನೂ ಸ್ವೀಕರಿಸಿದ್ದಾರೆ. ಪ್ರತಿಷ್ಠೆಯ ಪಟ್ಟ ಕೊಟ್ಟಿದ್ದಾರೆ. ಆದರೆ ನಾನು ಹುಡುಕುತ್ತಿರುವುದೇನನ್ನು? 

ಒಂದು ರಾತ್ರಿ ಹೀಗೆ, ಹಾಸಿಗೆಯ ಮೇಲೆ, ನಿದ್ದೆ ಬರದೇ ಕತ್ತಲಲ್ಲೇ ಎದ್ದು ಕುಳಿತ ಕಾಲಕ್ಕೆ ಅವನು, ಅದೇ ಅವನು ಪ್ರತ್ಯಕ್ಷನಾಗಿ ಮುಗ್ಧ ನಗೆ ನಕ್ಕಂತಾಯಿತು. ಯಾಕೋ ಎಣಿಸುತ್ತ ಹೋದಂತೆಲ್ಲ ಅಳು ಬರತೊಡಗಿತು. ಎಂಟು ವರ್ಷಗಳ ನಂತರ ನಾನು ಮೊದಲ ಬಾರಿಗೆ ಅಳತೊಡಗಿದೆ. ಶಬ್ದ ಮಾಡುವುದಕ್ಕೂ ಹೆದರಿ, ಉಸಿರು ಕಟ್ಟಿಕೊಂಡು, ಪಕ್ಕದಲ್ಲೆ ಮಲಗಿದ್ದ ಹೆಂಡತಿಯೇನಾದರೂ ಎದ್ದರೆ ಅವಳು ನಂಬಿದ್ದ ನನ್ನ ವ್ಯಕ್ತಿತ್ವವೇ ಸುಳ್ಳಾಗಿಬಿಡುತ್ತಿತ್ತು. ಅವಳಿಗೆ ಅಂಥ ಆಘಾತ ನೀಡಬಲ್ಲ ಧೈರ್ಯವೇ ನನ್ನಲ್ಲಿರಲಿಲ್ಲ. ದುಃಖ ತಾಳಲಾಗಲಿಲ್ಲ. ಕಾರಣವೇ ಗೊತ್ತಿರಲಿಲ್ಲ. ಅಳು ಒತ್ತರಿಸಿಕೊಂಡು ಬಂದಾಗ ಮೈಮನ ಸಹಕರಿಸದೆ ಹಿಂಸೆಯಾಗಿ ನರಕವನ್ನು ಅನುಭವಿಸಿ ಗೊತ್ತಿತ್ತು. ಧಾರಾಕಾರ ಅಳು ಬಂದರೂ ಯಾಕೆಂದೇ ತಿಳಿಯದ ವಿಚಿತ್ರ ಸ್ಥಿತಿ ಅದೇ ಮೊದಲಾಗಿತ್ತು. ಕೋಣೆಯಿಂದ ಹೊರಬಂದು ಬಾತ್‌ರೂಂಗೆ ಹೋಗಿ ಅಳತೊಡಗಿದೆ. ಎದುರಿನ ಕನ್ನಡಿಯಲ್ಲಿ ನನ್ನ ವಿಕಾರ ಮುಖ ಕಾಣುತ್ತಿತ್ತು. ಅಮ್ಮಾ ಅಮ್ಮಾ ಎಂದು ಧ್ವನಿಯಿಲ್ಲದೆ ಬರೀ ಬಾಯಾಡಿಸಿ ಅಳುತ್ತಿದ್ದೆ. ಎಷ್ಟೋ ಹೊತ್ತಿನ ಮೇಲೆ ಕನ್ನಡಿಯನ್ನೇ ನೋಡಿ ಅಳತೊಡಗಿದೆ. ಅಳುತ್ತಲೇ............ 

ನಂಬುತ್ತೀರೋ ಇಲ್ಲವೋ. 

ನಗು ಬಂತು. ಪುನಃ ನಗುವುದಕ್ಕಾಗಿ ಅಳು ಬರಿಸಿಕೊಂಡೆ. 

(ದಿನಾಂಕ 25/01/1998ರ ಉದಯವಾಣಿ ಸಾಪ್ತಾಹಿಕದಲ್ಲಿ ಪ್ರಕಟವಾದ ನನ್ನ ಮೊದಲ ಸಣ್ಣಕತೆ. ಚಿತ್ರ ಜೇಮ್ಸ್ ವಾಜ್)

2 comments:

 1. ನರೇಂದ್ರ,
  ಮೊನ್ನೆನೆ ಕಮೆಂಟ್ ಹಾಕಿದ್ದೆ...ಬಹುಶಃ ತಪ್ಪಿ ಪಬ್ಲಿಷ್ ಒತ್ತಿಲ್ಲ ಕಾಣುತ್ತದೆ...ಇವತ್ತು ನಿಮ್ಮ ಪ್ರತಿಕ್ರಿಯೆ ಏನಿರಬಹುದೆಂದು ನೋಡಿದಾಗ ನನ್ನ ಕಮೆಂಟೇ ಇಲ್ಲ!
  ನನ್ನ ಓದಿನ ಚಟದಲ್ಲಿ ಗಂಭೀರ ಸಾಹಿತ್ಯಗಳ ಜೊತೆ ತುಂಬಾ ಕಮ್ಮಿ...ಬಹುಶಃ ಅದರ ವ್ಯಾಪ್ತಿಯೊಳಗೆ ಇರುವಷ್ಟು ಯೋಗ್ಯತೆ ಇಲ್ಲವೇನೋ ಎಂದನಿಸಿಕೆಯಾಗಿತ್ತು...ಆದರೆ ಇತ್ತೀಚಿನ ಕೆಲವು ವರ್ಷಗಳಿಂದ ಓದಲು ಪ್ರಾರಂಭಿಸಿದ್ದಾಗಿನಿಂದ...ನಾನು ನನ್ನ ನಿಲುವನ್ನು ಬದಲಾಯಿಸಿದ್ದೇನೆ.
  ಬಹುಶಃ ಈ ನಿಮ್ಮ ಕತೆಯಂತೆ ನಾವೆಲ್ಲಾ ಜೀವನದಲ್ಲಿ ಬದುಕಲು ಹೋರಾಡುತ್ತಾ ನಮ್ಮ ನಿಜ ವ್ಯಕ್ತಿತ್ವನ್ನು ನಮ್ಮೊಳಗೆ ಹೂತು ಹಾಕುತ್ತೇವೆ...ಸುಂದರ ಮುಖವಾಡಗಳಿಂದ ನಮ್ಮನ್ನು ಮರೆಮಾಚುತ್ತೇವೆ....ಒಳಒಳಗೆ ರೋಧಿಸುತ್ತಾ ನಾವಲ್ಲದ ನಾವಾಗಿ ಸಮಾಜವನ್ನು ಮೆಚ್ಚಿಸಲು ನಮ್ಮನ್ನು ಕಳೆದುಕೊಳ್ಳುತ್ತೇವೆ. ಆದರೂ ಒಂದು ದಿನ ನಮ್ಮೆದುರು ನಮ್ಮ ನಿಜ ರೂಪ ನಮ್ಮೆದುರು ಪ್ರತ್ಯಕ್ಷವಾಗುತ್ತದೆ.... ಕಾಡಿಸುತ್ತದೆ...ಬಲಹೀನ ವ್ಯಕ್ತಿಯಾದರೆ ಸೋತು ಸುಣ್ಣವಾಗುತ್ತಾನೆ...ನನ್ನನ್ನೂ ಕಾಡಿದ ಈ "ನಾನು" ನನ್ನನ್ನು ಬದಲಾಯಿಸಿದೆ...ಹೊಸ ದಾರಿಯತ್ತ ಸಾಗುವಂತೆ ಪ್ರೇರೇಪಿಸಿದೆ.

  ನಿಮ್ಮ ತುದಿಯೆಂಬೋ ತುದಿಯಿಲ್ಲ- ಈಗಾಗಲೇ ೬ ಸಲ ಓದಿದ್ದೇನೆ....ನಾನು ಓದಿದ ನಿಮ್ಮ ನಿಮ್ಮ ವಿಮರ್ಶೆಗಳಲ್ಲಿ ತುಂಬಾ ಕಾಡಿದ ಲೇಖನ. ಲೇಖನ ಒಳ್ಳೆಯದಿದೆ ,...ಚೆನ್ನಾಗಿದೆ ಹೇಳಿ ಮುಗಿಸುವುದು ನನಗಿಷ್ಟವಿಲ್ಲ...ಆದರೆ ಇದರ ಮೇಲೆ ವಿಮರ್ಶೆ ಬರೆಯುವಷ್ಟು ಜ್ಞಾನ ಕೂಡ ನನಗಿಲ್ಲವೆಂಬುದೂ ಗೊತ್ತು. ಆದರೂ ಇನ್ನಷ್ಟು ಸಲ ಓದಿ ಬರೆಯುವ ಯತ್ನ ಮಾಡುತ್ತೇನೆ.
  ಶೀಲಾ

  ReplyDelete
 2. ಶೀಲಾ,
  ನಿಮ್ಮನ್ನ ನೀವು ಯಾಕೆ ಹೀಗಳೆದುಕೊಳ್ಳುತ್ತೀರಿ? ಅದು ಸರಿಯಲ್ಲ. ನಾವೆಲ್ಲರೂ ಮನುಷ್ಯರಾಗಿ ಸಮಾನ ಸುಖಿ/ದುಃಖಿಗಳು. ಭಾಷೆಯಲ್ಲಿ ಅದನ್ನು ವ್ಯಕ್ತಪಡಿಸುವುದು ಕೆಲವೊಮ್ಮೆ ಸಾಧ್ಯವಾಗುತ್ತದೆ ಕೆಲವೊಮ್ಮೆ ಆಗುವುದಿಲ್ಲ. ಕೆಲವೊಮ್ಮೆ ಬೇರೆಯವರು ವ್ಯಕ್ತಪಡಿಸಿದಾಗ ನಮಗೆ ಅದು ನಮ್ಮದೇ ಅನಿಸುತ್ತದೆ ಮತ್ತು ನಮ್ಮ ಅನುಭವ,ಓದು ಹೆಚ್ಚಾದಂತೆ ನಮಗೆ ನಮ್ಮನ್ನು ನಾವು ಸ್ಪಷ್ಟಪಡಿಸಿಕೊಳ್ಳುವುದು ಸುಲಭವಾಗುತ್ತದೆ ಎನ್ನುವುದು ಎಲ್ಲರೂ ಹಾದು ಬರಬೇಕಾದ ಒಂದು process ಅಷ್ಟೆ. ಇಲ್ಲಿ ಭಾಷೆ ನಮ್ಮನ್ನು ಮೋಸ ಮಾಡುವ ಸಾಧ್ಯತೆ ಕೂಡ ಇದೆ. ಅದರಲ್ಲಿ ಯಾರು ಹೆಚ್ಚು ಯಾರು ಕಡಿಮೆ ಅಂತ ಇಲ್ಲ. ಮತ್ತು ಅದೇ ಒಂದು ಹೆಚ್ಚುಗಾರಿಕೆಯೂ ಅಲ್ಲ. ಇನ್ನು ನನ್ನ ಬರವಣಿಗೆ ಒಮ್ಮೆ ಓದಿ ಮರೆಯಬಹುದಾದ್ದು ಅಷ್ಟೆ. ಅದನ್ನ ಕುರಿತು ಬರೆಯುವುದಕ್ಕಿಂತ ಸಾಧ್ಯವಾದರೆ ಒಳ್ಳೆಯ ಕೃತಿಗಳನ್ನೇ ಓದಿ ಮತ್ತು ಅದನ್ನು ನಮಗೂ ತಿಳಿಸಿ ಎನ್ನುವುದು ನನ್ನ ಆಸೆ. ಕಾಮೆಂಟ್ ಮಾಡರೇಶನ್ ಹಾಕಿದ್ದೆ, ಹಾಗಾಗಿ ನಿಮ್ಮ ಅನಿಸಿಕೆ ಪ್ರಕಟವಾಗುವುದು ತಡವಾಗಿರಬೇಕು. ನನಗೆ ಇವತ್ತೇ ಈಮೇಲ್ ಬಂದಿದ್ದು. ಮುಂದೆ ಮಾಡರೇಶನ್ ತೆಗೆದು ಹಾಕುತ್ತೇನೆ.

  ReplyDelete