ಕೊನೆ
ಅನೂ, ನೀನು ನಂಬು, ಇಲ್ಲ ಬಿಡು. ನಿನ್ನ ಮುಖದಲ್ಲಿ ನಗು ಯಾವಾಗಲೂ ಲಾಸ್ಯವಾಡುವುದನ್ನು ಬಯಸಿದೆ, ಅಷ್ಟೆ. ಅದಕ್ಕಾಗಿ ಏನೇನೋ ಮಾಡಿದೆ. ಹಲವು ಹತ್ತು ರೀತಿಯಲ್ಲಿ ಸೋತೆ. ನೀನು ಸ್ವತಃ ತಾನು ಸಂತೋಷವಾಗಿರಬಾರದು ಎಂದು ನಿಶ್ಚಯಿಸಿರುವಂತಿದೆ.ಕೆಲವರ ದೃಷ್ಟಿಯಲ್ಲಿ ನಾನು ನಿನ್ನನ್ನು ಬಯಸಿದೆ. ಇನ್ನು ಕೆಲವರಿಗೆ ನೀನೇ ನನ್ನನ್ನು ಪ್ರೀತಿಸುತ್ತಿದ್ದಿ. ಇದನ್ನು ನಿನಗೆ ಹೇಳಬಾರದಿತ್ತು? ಬೇರೆ ಯಾರ ಬಳಿ ಹೇಳಬಹುದಾಗಿತ್ತು ಅನೂ?
ನಿಜವಾಗಿ ನಡೆದದ್ದೇನು? ನನಗೆ ನೀನು ಸಂತೋಷವಾಗಿರುವುದು ಬೇಕು. ಅದಕ್ಕಾಗಿ ನಾನು ಏನು ಮಾಡಲೂ ತಯಾರು. ಯಾಕೆ ಎಂಬ ಬಗ್ಗೆ ನನ್ನಲ್ಲಿ ಉತ್ತರವಿಲ್ಲ. ನಾನು ನಿನ್ನನ್ನು ಪ್ರೀತಿಸುತ್ತಿದ್ದೇನಾ? ಈ ಪ್ರಶ್ನೆಯೇ ಒಂದು ಕ್ಲೀಷೆ. ಪ್ರೀತಿಯನ್ನು ದೃಢಪಡಿಸುವ ಅಗತ್ಯ ಅನುಮಾನದಿಂದ ಹುಟ್ಟುತ್ತದೆ. ನನ್ನಲ್ಲಿ ಅನುಮಾನಗಳಿಲ್ಲ, ಪ್ರಶ್ನೆಗಳೂ ಇಲ್ಲ. ನಿರ್ಧಾರಗಳೊಂದಿಗೆ ದೃಢವಾಗಿ ನಿಂತಿದ್ದೇನೆ ಅನೂ. ನನ್ನ ಪ್ರೀತಿ ಬಯಸುವುದು ನಿನ್ನ ಹಿತವನ್ನು. ನಿನ್ನ ಹಿತ ಯಾವುದರಲ್ಲಿದೆ ಅನೂ?
ಇಲ್ಲಿ ಭ್ರಮೆಗಳಿಲ್ಲ. ಕನಸುಗಳಿಲ್ಲ. ಕಲ್ಪನೆಗಳಿಲ್ಲ.
ನಿನ್ನ ಒಳಿತನ್ನು ಮಾತ್ರ ಹಾರೈಸುವ, ಬಯಸುವ ಒಂದು ಒಳ್ಳೆಯ ಪ್ರಜ್ಞೆ....ಇದನ್ನೇ ಪ್ರೀತಿ ಎಂದು ಅನುಭವದ ಮುಸುಕಿನೊಳಗೆ ಸೆಳೆದುಕೊಳ್ಳಬಹುದಾದರೆ.....ಇಲ್ಲ, ಇಲ್ಲಿ ಹೇಗಾದರೂ ನಿನ್ನನ್ನು ನನ್ನವಳನ್ನಾಗಿಸಿಕೊಳ್ಳಬೇಕೆಂಬ ಹುಚ್ಚಿಲ್ಲ. ಜಗತ್ತನ್ನೆಲ್ಲ ಸವರಿ ಹಾಕುವ ಕೆಚ್ಚಿಲ್ಲ. ಈ ಪ್ರೀತಿ ಉಕ್ಕಿ ಹರಿಯುವ ಪ್ರವಾಹದಂಥದಲ್ಲ. ಕಡಲಿನಂಥದು. ಮಂದಗಾಮಿನಿಯಂತೆ, ಸೆಳೆತಗಳಿಲ್ಲದ್ದು. ಸಂಘರ್ಷಗಳಿಲ್ಲದ ಹಾದಿಯಲ್ಲಿ ನೀನು ಹಾಯಾಗಿ ಬದುಕುವಂತಾದರೆ ನಾನು ಮನಶ್ಶಾಂತಿ ಹೊಂದುತ್ತೇನೆ. ಆದರೆ ನಿನ್ನ ಸಂತೋಷ ಯಾವುದು, ಎಲ್ಲಿದೆ ಎಂದು ನನಗೆ ತಿಳಿಯುತ್ತಿಲ್ಲ ಅನೂ. ನಿನ್ನ ಹೃದಯ - ಮನಸ್ಸುಗಳಾಳದ ನೋವಿನ ಗರ್ಭ ಮೌನದ ಮಡಿಲೊಳಗೆ ಆಗೊಮ್ಮೆ ಈಗೊಮ್ಮೆ ಮುಲುಕಿದಾಗ ಸ್ಪಂದಿಸಿದ ನಾನು ಗ್ರಹಿಸಿದ ಭಾವ...ಮಾತುಗಳ ಅಂಗಳ ದಾಟಿ ಕತ್ತಲು ತುಂಬಿದ ಮನೆ ಹೊಕ್ಕರೆ ಅಲ್ಲಿ ಹೆಪ್ಪುಗಟ್ಟಿರುತ್ತಿದ್ದ ಮೌನದ ಭಾವ ಕೇವಲ ಅನುಮಾನವಾಗಿತ್ತು ಅನೂ. ಹೌದೆ? ಅಲ್ಲವೆ? ಸಂಕಟ.
ನಾವಿಬ್ಬರೂ ಮದುವೆಯಾಗುವ ವಿಚಾರದಲ್ಲಿ ಯೋಚನೆ ಇದೆಯಾ ಎಂದು ಕೇಳಬೇಕಾಯ್ತಲ್ಲ! ಇದು ನನಗೆ ಹೊರಬರಲಾರದ್ದನ್ನು ಕೈ ಹಾಕಿ ಕೆದಕಿ ಕೆದಕಿ ಕಕ್ಕಿದ ಹಾಗಿತ್ತು - ಕೇಳುವಾಗ. ಆದರೂ ಬರಬೇಕಾದ್ದೇನೂ ಹೊರ ಬರದೆ ಕೇವಲ ವಾಕರಿಕೆ ಮಾತ್ರ ಬಂದ ಹಾಗೆ.....ಎಷ್ಟು ಕಷ್ಟ? ನನಗೆ ಗೊತ್ತಿತ್ತು ಅನೂ, ಆ ಪಾತ್ರಕ್ಕೆಂದೂ ನಾನು ಅರ್ಹನಾಗಲಾರೆ ಎಂದು. ಹೆಳವನ ಹಾದಿಯೊಳು ಮುತ್ತಿದ್ದರೇನು, ರತ್ನವಿದ್ದರೇನು? ಬೇಕೆನಿಸೆ ಎತ್ತಿಕೊಳ್ಳಲಾರ, ಕೈಯೇ ಇಲ್ಲ. ಬೇಡವೆಂದು ಹಾಯಲಾರ, ಕಾಲೇ ಇಲ್ಲ!
ನಿನಗೆ ಯಾರ ಕನಿಕರ, ಅನುಕಂಪ, ಸ್ನೇಹ, ಪ್ರೀತಿ, ಕೊನೆಗೆ ಏನೂ..... ಬೇಕಾಗಿಲ್ಲ ಎಂದು ಗೊತ್ತು ಅನೂ. ಆ ಹುಡುಗನೊಂದಿಗೆ ಕಳೆದ ಮಧುರ ಕ್ಷಣಗಳು ತಾನು ಮೋಸಹೋದೆನಲ್ಲಾ ಎಂದು ಚೀರುವ ಹೃದಯವನ್ನು ಹಿಂಡಿ ಹಿಪ್ಪೆ ಮಾಡುತ್ತಿವೆ ಎಂಬುದು ನನಗೂ ಅರ್ಥವಾಗುತ್ತದೆ. ವರ್ತಮಾನದ ಪ್ರತಿಯೊಂದೂ ಭೂತಕಾಲದೊಂದಿಗೆ ತಳುಕು ಹಾಕಿಕೊಂಡು ನಿನ್ನನ್ನು ಬೇಯಿಸುತ್ತಿದೆ ಎಂದೂ ಗೊತ್ತು. ಮತ್ತೊಮ್ಮೆ ದೈಹಿಕವಾಗಿ, ಮಾನಸಿಕವಾಗಿ ತೆರೆದುಕೊಳ್ಳಲಾರೆ ಎಂಬ ನಿನ್ನ ನಿಲುವು ಶತಶತಮಾನಗಳ ಹಿಂದೆ ಜಡಿದ ತುಕ್ಕು ಹಿಡಿದ ಬೀಗವಾಗಿ ಎಂದೂ ತೆರೆದುಕೊಳ್ಳಲಾರದ ಬಾಗಿಲುಗಳಾಚೆ ನೀನು....ಒಬ್ಬಳೇ.....
ಅನೂ, ಅನೂ, ನನಗಿದನ್ನೆಲ್ಲ ಸಹಿಸಲು ಕಷ್ಟವಾಗುತ್ತಿದೆ ಅನೂ. ಅಂದು ನಾನು ನಿನ್ನನ್ನು ಕೆದಕೀ ಕೆದಕೀ ಕೇಳಿ ವಿಷಯ ತಿಳಿದುಕೊಳ್ಳಲು ಪ್ರಯತ್ನಿಸಿದ್ದು ಕೇವಲ ಕತೆ ಕೇಳುವ ಕುತೂಹಲದಿಂದಲ್ಲ ಅನೂ. ನಾನೇನೂ ಮಾಡಲಾಗಲಿಲ್ಲವಲ್ಲಾ ಎಂಬ ನೋವು ನನ್ನನ್ನು ಹಿಂಡತೊಡಗಿದೆ. ನಿನ್ನ ನೋವನ್ನೆಲ್ಲ ನನಗೇ ಕೊಡುವಂತಿದ್ದರೆ...
ಕೊನೆಗಿನ್ನೇನು ಹೇಳಲಿ ಅನೂ? ನಿನ್ನಿಷ್ಟದಂತೆ ನೀನಿರು ಅನೂ. ನೀನು ಹೀಗಿರಬೇಕು, ಹಾಗಿರಬೇಕು ಎನ್ನಲು ನಾನ್ಯಾರು ಅಲ್ಲವೆ ಅನೂ?
ನಿನ್ನ
ಹೇಮಂತ.
"ಐದರ್ ಮೀನ್ ಆರ್ ಎಕ್ಷ್‌ಟ್ರೀಮ್"
ಹೀಗೆ ಉಗಿದವಳು ಅನೂ, ಪತ್ರಕ್ಕಲ್ಲ, ಅದರ ಭಾವಕ್ಕೆ.
ಕತೆ
ಹುಟ್ಟಿ ಕೈಕಾಲು ಬಡಿಯುವ ಮುನ್ನ ತಾಯಿ ತೀರಿಕೊಂಡಳಂತೆ. ಬಹುಶಃ ಆಗಲೇ ಯಾರಾದರೂ ಗೊಣಗಿರಬೇಕು, ಆಚೀಚೆ, ‘ಶನಿಪಿಂಡ’ ಎಂದು. ಚಿಕ್ಕಂದಿನಿಂದಲೂ ಎಲ್ಲರೂ ನನ್ನ ಸಂಕೋಚವನ್ನು ಒಣಹೆಮ್ಮೆ ಎಂದು, ಕೀಳಿರಿಮೆಯನ್ನು ಅಹಂಕಾರವೆಂದು, ಮೌನವನ್ನು ಕುತಂತ್ರವೆಂದು ತಿಳಿದು ದ್ವೇಷಿಸುತ್ತಿದ್ದರೆಂದು ಎನಿಸುತ್ತದೆ, ಈಗ. ಆಗ ಅದ್ಯಾವುದೂ ಅರ್ಥವಾಗುತ್ತಿರಲಿಲ್ಲ. ಹಾಗಾಗಿ ಮುಖ್ಯ ಎನಿಸಲೇ ಇಲ್ಲ. ಇದೇ ಇನ್ನಷ್ಟು ತಪ್ಪು ಹೆಜ್ಜೆಗಳಿಗೆ ಕಾರಣವಾಗುತ್ತ ಹೋಗಿರಬೇಕು.
ಅಪ್ಪ ತಾನಿಟ್ಟುಕೊಂಡವಳನ್ನೇ ಕಟ್ಟಿಕೊಂಡು ಅವಳ ಮನೆಯಲ್ಲೇ ಇರತೊಡಗಿದಾಗ ನನ್ನನ್ನು ಸಾಕಿಕೊಂಡವಳು ಚಿಕ್ಕಮ್ಮ. ಪ್ರೈಮರಿ ಸ್ಕೂಲ್‌ನ ಟೀಚರ್. ನಾನು ಬಿ.ಕಾಂ ಕೊನೆಯ ವರ್ಷದಲ್ಲಿದ್ದಾಗ ಚಿಕ್ಕಪ್ಪ ತೀರಿಕೊಂಡರು. ಚಿಕ್ಕಮ್ಮನ ನಾಲ್ಕು ಹೆಮ್ಮಕ್ಕಳ ಭರ್ಜರಿ ನೊಗಕ್ಕೆ ನಾನು ಕತ್ತು ಕೊಡಬೇಕಾಗಿ ಬಂದದ್ದು ಹೀಗೆ. ಇದೇನೂ ನನ್ನಲ್ಲಿ ಯಾವುದೆ ಬೇಸರ, ಕಿರಿಕಿರಿ ಹುಟ್ಟಿಸಿರಲಿಲ್ಲ, ಅನೂ ನನಗೆ ಮುಖ್ಯ ಎನಿಸುವವರೆಗೆ. ನನ್ನ ಎಂಬ ಬದುಕಿನ ವೈಯಕ್ತಿಕ ಎಂಬ ಪ್ರಶ್ನೆಗಳಿಗೆ ಉತ್ತರಿಸುವ ಛಾತಿ ಬೇಕೆಂದಾಗ ಅಂಥ ಸ್ವಾತಂತ್ರ್ಯವೇ ನನಗಿಲ್ಲ ಎಂಬುದು ಅರಿವಿಗಿಳಿಯುವವರೆಗೆ....
ಕಾಲೇಜು ಮುಗಿಸಿದ ಎರಡೇ ತಿಂಗಳಲ್ಲಿ ಆ ಮನೆ, ಜಾಗ ಮಾರಬೇಕಾಯಿತು.
"ಬಾವಿಯಲ್ಲಿ ನಮಗೇ ನೀರಿಲ್ಲ, ನೀವು ಬೇರೆ ಕಡೆಯಿಂದ ತಂದುಕೊಳ್ಳಿ." ಪಕ್ಕದ ಮನೆಯ ಸುಬ್ರಾಯ ಭಟ್ಟರ ತಕರಾರು. ಮನೆಗಿದ್ದ ಇಕ್ಕಟ್ಟಾದ ಒಂದು ದಾರಿಯನ್ನು ಮುಚ್ಚುವಂತೆ ತಮ್ಮ ಮನೆಯ ಅಂಗಳಕ್ಕೆ ಸಿಮೆಂಟ್ ಹಾಕಿ ಮೇಲೆ ತಗಡು ಹೊದೆಸಿ ಅಡ್ಡ ನಿಂತ ಗುರ್ರಾಜರಾಯರು! ಸ್ವತಃ ಅಣ್ಣ-ತಮ್ಮಂದಿರೇ ತಮ್ಮ ತಂಗಿಯರಾದ ನನ್ನ ಅಮ್ಮ ಮತ್ತು ಈ ಚಿಕ್ಕಮ್ಮನ ಬಗ್ಗೆ ತೀರ ಹಗುರವಾದ ಮಾತನ್ನು ಊರ ತುಂಬ ಚೆಲ್ಲುತ್ತಿರಬೇಕಾದರೆ ಜನ ತಾನೆ ಏನು ಮಾಡಿಯಾರು? ಆರು ಲಕ್ಷಕ್ಕೆ ಎಲ್ಲ ಮಾರಬೇಕಾಯಿತು. ಆಗ ಓಡೋಡಿ ಬಂದರು ಚಿಕ್ಕಮ್ಮನ ಒಬ್ಬ ಅಣ್ಣ ಮತ್ತು ಇನ್ನೊಬ್ಬ ತಮ್ಮ. "ಯಾರಪ್ಪನ ಜಾಗ ಅಂತ ಮಾರಿದ್ದೋ ಬೇವಾರ್ಸಿ ಮಗನೆ" ಎಂದು ಸುರುವಾದ ಆಸ್ಫೋಟ "ನಮ್ಮ ನಮ್ಮ ಪಾಲು ಕೊಟ್ಟು ನೀವೆಲ್ಲಿ ಬೇಕಾದ್ರೂ ಹಾಳಾಗಿ ಹೋಗಿ" ಎಂಬ ಮಾತಿನತ್ತ ತಲುಪುವುದಕ್ಕಷ್ಟೇ ಆಗಿತ್ತು. ಆದರೆ ಒಳ್ಳೆಯ ಬೆಲೆ ಬಾಳುವ ಆಸ್ತಿಯನ್ನು ಹೇಳದೆ ಕೇಳದೆ ಮೂರು ಕಾಸಿಗೆ ಹರಾಜಾಕಿದ ಎಂಬ ಹೆಸರು ಉಳಿಯಿತು.
ಒಂದು ಬಾಡಿಗೆ ಮನೆ ಸಿಗಲಿಲ್ಲ ಊರಲ್ಲಿ. ಊರಿಂದ ಐದಾರು ಕಿಲೊಮೀಟರ್ ದೂರದ ಗುಡ್ಡೆಯ ಅಂಚಿನಲ್ಲಿದ್ದ ಸಿಮೆಂಟ್ ಶೀಟ್‌ಗಳನ್ನು ಹೊದೆಸಿದ್ದ ಒಂದು ಶೆಡ್ ಕೊನೆಗೂ ಸಿಕ್ಕಿದ್ದು. ಖಾಲೀ ಹಾಲ್‌ನಲ್ಲಿ ಒಂದೇ ಒಂದು ಅಡ್ಡಗೋಡೆಯಿರಲಿಲ್ಲ. ಬಾತ್‌ರೂಂ, ಟಾಯ್ಲೆಟ್ ಏನೂ ಇರಲಿಲ್ಲ. ಪುಣ್ಯಕ್ಕೆ ನೀರು, ಕರೆಂಟ್ ಇದ್ದವು. ಸುತ್ತಿನ ಹತ್ತು ಸೆಂಟ್ಸ್ ಜಾಗ ಕ್ರಯಕ್ಕೆ ಸಿಕ್ಕಿತು. ಪವಾಡ ಎನಿಸುವಂತೆ ಆಗ ಕೈಯಲ್ಲುಳಿದಿದ್ದ ಹಣದಲ್ಲೇ ಜಾನಕಿಯ ಮದುವೆಯೂ ಆಗಿ ಹೋಯಿತು. ಕ್ರಮೇಣ ಬಾವಿ ತೋಡಿಸಿದೆ, ಸಣ್ಣ ತೋಟ ಬೆಳೆಸಿದೆ, ತರಕಾರಿ, ಬಾಳೆ, ಹೂ ಗಿಡಗಳು. ಬೆಳ್ದಿಂಗಳ ರಾತ್ರಿ ಬಾವಿಕಟ್ಟೆಯ ಬಳಿಯ ನೀರಿನ ತೊಟ್ಟಿದಂಡೆಯ ಮೇಲೆ ಒರಗಿ ಕೂತು ಒಂಟಿತನದ ಗಾಳಿ ಸೇವಿಸುತ್ತ ಅದರ ಹಿತಕ್ಕೆ ಅರಳುತ್ತ ಗಟ್ಟಿಯಾಗುತ್ತ ಹೋದೆ.
ಜಾನಕಿಯೀಗ ಒಂದು ಹೆಣ್ಣುಮಗುವಿನ ತಾಯಿ. ತಕ್ಕಮಟ್ಟಿಗೆ ಚೆನ್ನಾಗಿಯೇ ಇದ್ದಾಳೆ. ಎರಡನೆಯವಳು ನೇತ್ರ. ಇನ್ನೆರಡೇ ವರ್ಷಗಳಲ್ಲಿ ಡಿಗ್ರಿ ಮುಗಿಸುತ್ತಾಳೆ. ಪಿ.ಯು.ಸಿ.ಯಲ್ಲಿರುವ ಚೈತ್ರ ಥೇಟ್ ಅನುರಾಧಾ ತರ rank student ಎಂದು ಹೆಸರು ಮಾಡಿದ್ದಾಳೆ. ಕೊನೆಯವಳು ಅನನ್ಯ ಎಸ್ಸೆಸ್ಸೆಲ್ಸಿಯಲ್ಲಿದ್ದರೂ ಚೈತ್ರಳಿಗಿಂತ ದೊಡ್ಡವಳಂತೆ ಕಾಣುತ್ತಾಳೆ. ಚಿಕ್ಕಮ್ಮನ ಸರ್ವೀಸು ಇನ್ನೆರಡು ವರ್ಷಕ್ಕೆ ಮುಗಿಯುವುದರಲ್ಲಿತ್ತು. ಚಿಕ್ಕಮ್ಮನ ಅಣ್ಣನ ಅಂದರೆ ನನ್ನ ಮಾವನ ಮಗಳು ಅನೂ, ಅನುರಾಧಾ. ತಂಗಿಯನ್ನು ಬದುಕಿದ್ದೀಯಾ ಸತ್ತಿದ್ದೀಯಾ ಎಂದು ಕೇಳುವ ಸೌಜನ್ಯವನ್ನು ಎಂದೂ ತೋರಿಸದಿದ್ದರೂ ಇಬ್ಬರು ಮಾವಂದಿರು ನನ್ನನ್ನು ಕುಟುಂಬದ ಆಸ್ತಿ ನುಂಗಿ ಹಾಕಿದವ ಎಂದು ಲೇಬಲ್ ಹಚ್ಚಿ ದ್ವೇಷಿಸುತ್ತಲೇ ಬಂದಿದ್ದರು. ಕಿರಿಯ ಮಾವ ಕಳೆದ ವರ್ಷ ಬ್ರೈನ್‌ಟ್ಯೂಮರ್‌ನಿಂದ ತೀರಿಕೊಂಡಿದ್ದ. ಮೇಲಿಂದ ಮೇಲೆ ವಾಂತಿಯಾಗುತ್ತಿದ್ದರೂ ಸರಿಯಾದ ಚಿಕಿತ್ಸೆ ಕೊಡಿಸದೆ ನಿಂಬೆ ಪಾನಕ ಮಾಡಿಕೊಡುತ್ತಾ ಸಮಯ ಮೀರಿದ ಮೇಲೆ ಆಸ್ಪತ್ರೆಗೆ ಸಾಗಿಸಿದ್ದರು. ಆಪರೇಶನ್ ಥಿಯೇಟರ್ ಹೊಗುವ ಮುನ್ನವೇ ಹೆಣವಾಗಿ ಬಿಟ್ಟಿದ್ದ. ಆ ದಿನವೂ ಚಿತೆಯ ಬಳಿ ನಿಂತವ ನಾನೇ...ಪೂರ್ತಿ ಸುಟ್ಟು ಮುಗಿಯುವವರೆಗೆ.
ಊರಲ್ಲಿ ಯಾರ ಹೆಣ ಎತ್ತುವುದಿದ್ದರೂ ಜನ ನನ್ನನ್ನು ಕರೆಯುತ್ತಿದ್ದರು. "ಹೇಮಾ, ಸೊಲ್ಪ ಬಾ ಮಾರಾಯ..." ನಾನೂ ಆಫೀಸಿಗೆ ರಜೆ ಹಾಕಿಯಾದರೂ, ಜಾತಿ ಪಾತಿ ನೋಡದೆ ಹೋಗುತ್ತಿದ್ದೆ. ಚಿಕ್ಕಮ್ಮ ಗೊಣಗುವುದಿತ್ತು, "ಒಳ್ಳೆಯದಕ್ಕೆ ನೆನೆಯದ ಈ ಜನ ಹೆಣ ಸುಡಲು ಕರೆದಾಗ ಇವನ್ಯಾಕೆ ಹೋಗಬೇಕು?" ಎಂದು ಸಿಟ್ಟಾಗುತ್ತಿದ್ದುದೂ ಇತ್ತು.
ದೊಡ್ಡ ಮಾವ ಈಗ ಎರಡನೆಯ ಬಾರಿಗೆ ಎಂ.ಎಲ್.ಎ. ಆಗಿರುವಾತ. ಇಂಥವನ ಮಗಳನ್ನು ಪ್ರೀತಿಸುವುದೆಂದರೆ ಏನು ಎಂಬುದಂತೂ ನನ್ನ ಪ್ರಜ್ಞೆಗಿಳಿದಿತ್ತು. ಆದರೂ.....ಅವಳನ್ನು ನನ್ನ ಹೃದಯದಲ್ಲಿಟ್ಟುಕೊಂಡು ಪೂಜಿಸಿದ್ದೆನೆ ಹೊರತು ಎಂದೂ ಆ ಪ್ರೀತಿಯ ಪ್ರದರ್ಶನಕ್ಕೆ ಹೋಗಲಿಲ್ಲ. ಎನ್ನ ಹೃದಯದ ಹಣತೆಯಲ್ಲಿ ನೀನೊಂದು ಆರದಾ ದೀಪ| ನನ್ನ ಬಾಳ ಜ್ಯೋತಿ ಆರಿದರೂ ನಿನ್ನ ನೆನಪು ಮಾಸರು, ಪ್ರೇಮ ಆರದು| ಎಂದು ಕವನ ಬರೆದು ನನ್ನ ಪ್ರೀತಿಯನ್ನು ಅಮರವಾಗಿಸಿಕೊಂಡು ಸಮಾಧಾನ ಪಟ್ಟುಕೊಂಡಿದ್ದೆ.
ಎಲ್ಲರ ನಿರೀಕ್ಷೆ, ಕಲ್ಪನೆಗಳಿಗೆ ಆಘಾತ ನೀಡುವಂತೆ ಅನೂ ಸುದ್ದಿ ಮಾಡಿದ್ದಳು. ಯಾರಿಗೂ ಒಂದಿನಿತು ಸುಳಿವು ನೀಡದೆ ಯಾರೋ ರಫಿ ಎಂಬವನೊಡನೆ ಓಡಿ ಹೋಗಿದ್ದಳು. ಎಂ.ಎಲ್.ಎ. ಮಗಳ ಸುದ್ದಿ ಗುಸುಗುಸು ಎಂದು ಹಬ್ಬಿ ನನ್ನ ಕಿವಿಗೂ ಬಿದ್ದಾಗ ನನ್ನ ಕಲ್ಪನೆಯ ಮಧುಮಧುರ ಪಲುಕುಗಳೆಲ್ಲ ಕೀರಲು ರಾಗ ತೆಗೆದು ನನ್ನನ್ನು ಗೇಲಿ ಮಾಡಿ ಕೇಕೆ ಹಾಕಿ ನಗತೊಡಗಿದವು. ಮಾವ ಹಾರಾಡಿದ್ದನಂತೆ. " ಆಸ್ತಿ ನುಂಗಿ ನೀರು ಕುಡಿದಿದ್ದು ಸಾಲದಂತ ಆ ಹೇಮಂತ ನನ್ನ ಹುಡುಗಿಯ ತಲೆ ಕೆಡಿಸಿರಬೇಕು, ಜಾತಿ ಧರ್ಮ ಎಲ್ಲ ಸುಳ್ಳು ಅಂತ ಉಪದೇಶ ಮಾಡಿ... ಇದೇ ಬೋಳಿಮಗನ ಧೈರ್ಯ ಇಬ್ಬರಿಗೂ. ಇವನ ಕೈಕಾಲು ಮುರೀಬೇಕು ಮೊದಲು, ಮೂರು ಕಾಸಿನ ಬೇವಾರ್ಸಿ..." ಸುದ್ದಿ ತಂದ ಗಣಪುಗೆ ಹೇಳಿದ್ದೆ, "ನಿಲ್ಲಿಸು ಮಾರಾಯ, ಹೆಚ್ಚೆಂದರೆ ಮಾವನ ಮಾತು ಕೇಳಿ ನಗಬೇಕು ಅನಿಸುತ್ತೆ ಅಷ್ಟೆ. ಸತ್ಯ ಏನಂತ ತಿಳಿಯದವರ, ತಿಳಿಯುವ ಮನಸ್ಸೂ ಇಲ್ಲದವರ ಪೆದ್ದು ಮಾತು ಅವೆಲ್ಲ. ಕಾಲ ಕಳೆಯುತ್ತ ಮಾವನಿಗೇ ಎಲ್ಲ ಗೊತ್ತಾಗುತ್ತೆ ಬಿಡು..."
ಎಂದಿನಂತೆ ರಾತ್ರಿ ಬಾವಿಕಟ್ಟೆಯ ಬಳಿ ಕುಳಿತು ಆ ನೀರವತೆಯಲ್ಲಿ ಚುಕ್ಕಿಗಳು ತುಂಬಿ ನಿಗಿನಿಗಿ ಮಿನುಗುತ್ತಿದ್ದರೂ ನಿಗೂಢವಾಗುಳಿದ ಆಕಾಶದಡಿ ಒಬ್ಬನೇ, ಏನೊಂದೂ ಯೋಚನೆಗಳಿರದ ಖಾಲಿ ಮನಸ್ಸಿನ ತುಂಬ ತುಂಬಿಕೊಂಡ ಮೌನ ವೈರಾಗ್ಯವಾಗಿ ಆಲಾಪಿಸುತ್ತಿರುವಾಗ ಹೃದಯ ಕಲ್ಲಾಗಿ ಬದಲುತ್ತಿತ್ತು. ಜಗತ್ತನ್ನು ಮುಖಬೆಲೆಗೆ ನಂಬಬಾರದು, ಭಾವನೆಗಳ ದಾಸನಾಗಬಾರದು, ಸುಂದರ, ಸೌಮ್ಯ, ಚೆನ್ನ ಎನಿಸಿದವುಗಳನ್ನು ಒಪ್ಪಿಕೊಂಡ ಕ್ಷಣಕ್ಕೆ ಅಪ್ಪಿಕೊಳ್ಳಬಾರದು......ಇಂಥ ಏಟುಗಳಿಂದಲ್ಲವೆ ನಾನು ಬೆಳೆದಿದ್ದು, ಉಳಿದಿದ್ದು? ಆದರೆ ಹಾಗೆ ಇನ್ನೂ ಉಳಿದಿರುವುದಕ್ಕೆ ಏನಾದರೂ ಅರ್ಥವಿದೆಯೆ? ಬದುಕಬೇಕೆಂದು ಬದುಕುವುದೆ, ಸಾಯುವವರೆಗೂ....
ನೇತ್ರ, ಚೈತ್ರ, ಅನನ್ಯರ ಕಣ್ಣುಗಳಲ್ಲಿ ಮುಗ್ಧತೆಯ ಲೋಕ ಜಾರಿ ಕನಸುಗಳ ಲೋಕ ಅರಳುತ್ತಿದ್ದ ದಿನಗಳವು. ನಿರ್ಧರಿಸಿದ್ದೆ....ಈ ಬದುಕನ್ನು ನನಗಾಗಿ ಬದುಕುವ ಸ್ವಾತಂತ್ರ್ಯವಂತೂ ಇಲ್ಲ. ಇವರ ಕನಸುಗಳನ್ನು ನನಸಾಗಿಸಲು ಒತ್ತಾಸೆಯಾಗಿ ನಿಂತರೆ.....ಅದರಲ್ಲೆ ಎಂಥ ತೃಪ್ತಿ, ಸಾರ್ಥಕತೆ ಇದೆಯಲ್ಲವೆ?
ಬದುಕಿನ ಕೆಲವು ಕಾಕತಾಳೀಯ ವಿದ್ಯಮಾನಗಳು ಹೇಗೆ ಜನರ ಸುಳ್ಳು ಸುಳ್ಳು ಕಲ್ಪನೆಗಳೇ ನಿಜವೆನ್ನಿಸಿ ಬಿಡುತ್ತವೋ! ರಫಿ ಮತ್ತು ಅನೂ ಇಬ್ಬರಿಗೂ ಓಡಿ ಹೋಗಲು, ಎಲ್ಲೋ ಉಳಿದುಕೊಂಡು, ಮದುವೆಯಾಗಿ ಸಂಸಾರ ಹೂಡಲು ಎಲ್ಲ ವ್ಯವಸ್ಥೆ ಮಾಡಿ ಧೈರ್ಯ ತುಂಬಿದವ ನಾನೇ ಎಂಬ ಗುಲ್ಲು ಊರಲ್ಲಿದ್ದರೂ ಕ್ರಮೇಣ ಅದೆಲ್ಲ ಸುಳ್ಳು ಎಂಬುದು ಎಲ್ಲರಿಗೂ ಅರ್ಥವಾಗಿತ್ತು. ಆದರೆ ವರ್ಷ ಬದಲುವ ಮುನ್ನವೇ ಎಲ್ಲ ತಲೆಕೆಳಗಾಗುವಂಥ ಘಟನೆಯೊಂದು ನಡೆಯಿತು. ಅನೂ ನನ್ನ ಆಫೀಸಿನಲ್ಲಿ ಪ್ರತ್ಯಕ್ಷಳಾಗಿದ್ದಳು. ಅವಳು ಅನೂ ಎಂದು ಗುರುತು ಹತ್ತುವುದೇ ಕಷ್ಟವಾಗುವಂತೆ ಸೊರಗಿ ಕಡ್ಡಿಯಂತಾಗಿದ್ದ, ಕೆದರಿದ ತಲೆಯ, ಸೀರೆ ಉಟ್ಟು ವಿಚಿತ್ರ ಗಾಂಭೀರ್ಯ ಪಡೆದಿದ್ದ ಅವಳ ಮುಖದಲ್ಲಿ ನೋವು ಮಡುಗಟ್ಟಿ ನಿಂತಿತ್ತು. ಹೊರ ಬಂದಾಗ ಅವಳ ಲಗ್ಗೇಜ್ ನೋಡಿ ಇನ್ನೂ ಆಶ್ಚರ್ಯವಾಯಿತು. "ಊರಿಗೆ ಬರ್ತಾ ಇದ್ದೀಯಾ ಅನೂ" ಎಂದಾಗ ದುಃಖ ತಡೆಯಲಾರದೆ ಅತ್ತೇ ಬಿಟ್ಟಳು. "ರಫೀ ಹೋಗಿಬಿಟ್ಟ ಹೇಮಾ" ಎಂದದ್ದಷ್ಟೇ. ಆ ದಿನಗಳ ಬಗ್ಗೆ ನಾನು ಬೇರೇನೂ ಕೇಳಲಿಲ್ಲ, ಅವಳೇನೂ ಹೇಳಲಿಲ್ಲ.
ಅವಳನ್ನು ಊರಿಗೆ ಮರಳಿ ಕರೆತಂದವ ನಾನು ಎಂಬುದೇ ಇನ್ನಿಲ್ಲದ ಊಹಾಪೋಹಗಳಿಗೆ ಕಾರಣವಾಯಿತು. ಇತ್ತ ಅವಳನ್ನೊಪ್ಪಿಸಿ, ಅವಳಪ್ಪ ಅಮ್ಮನನ್ನೊಪ್ಪಿಸಿ ಪುನಃ ಅವಳನ್ನು ಅವಳ ಮನೆಗೇ ಸೇರಿಸಬೇಕಾದರೆ ಕೇಳಬಾರದ್ದನ್ನೆಲ್ಲ ಕೇಳಬೇಕಾಯಿತು.
"ಅವಳೇನಾದರೂ ಬಸಿರಾಗಿದ್ದರೆ ಅವಳನ್ನ ನೀನು ಆಗುತ್ತಿಯೇನೋ ಭಿಕನಾಸಿ" ಎಂದಿದ್ದ ನನಗಿಂತ ಹತ್ತು ವರ್ಷಕ್ಕೆ ಕಿರಿಯವನಾದ ಅನುರಾಧಾಳ ತಮ್ಮ ಜಗದೀಶ. "ದಮ್ಮಯ್ಯ ಅಂತ ಆದೇನು" ಎಂದಿತ್ತು ಹೃದಯ. ಆದರೆ ಮೂಕನಾಗಿ ಎಲ್ಲ ಕೇಳಿಸಿಕೊಂಡೆ. ಅನೂ ಸಹ.
"ಊರಲ್ಲಿದ್ದವರ ಉಸಾಬರಿಯೆಲ್ಲ ನಿನಗ್ಯಾಕೆ ಮಾರಾಯ" ಎಂದಿದ್ದರು ಚಿಕ್ಕಮ್ಮ. "ನಿನ್ನದೇ ನಿನಗೆ ಹಾಸಿ ಹೊದೆಯುವಷ್ಟಿರುವಾಗ" ಎಂದೂ ಸೇರಿಸಿದಾಗ ಮಾತ್ರ ಮೈಯುರಿಯಿತು. ಅನೂನ ನೇರ ನನ್ನ ಮನೆಗೇ ಕರೆತರಲಿಲ್ಲ ಯಾಕೆ? ಈ ಅನೂನ ಗುಬ್ಬಚ್ಚಿಯಂತೆ ನನ್ನ ಹೃದಯದ ಗೂಡಲ್ಲಿಟ್ಟು ಕಾಯುತ್ತಿರಲಿಲ್ಲವೆ ನಾನು?
ಮತ್ತೆ ಮೌನದಡಿ ಕೂತಾಗ ಕಡುನೀಲಿ ಬಾನಿಂದ ನನ್ನ ಕಲ್ಪನೆಯ ಮಿನುಗು ತಾರೆಗಳು ಪಕಪಕನೆ ಉದುರಿ ನಕ್ಕಿದ್ದವು. ಈಜು ಬಾರದವ ಮುಳುಗಿದವರನ್ನೆಂತು ಕಾಯ್ವನೊ ಗೆಳೆಯ...?
ಕಾಲೇಜಿನಲ್ಲಿದ್ದಾಗ ಈ ಅನೂ ಬಗ್ಗೆ ಬರೆದಿದ್ದ ಕವನದ ಸಾಲುಗಳು ನೆನಪಾಗಿದ್ದವು. ನನ್ನಿಂದೇ ನಿನ ಬಾಳಹಾದಿಯೊಳಿರುವ ಹೂವುಗಳೆಲ್ಲ ಬಾಡಿ ಹೋಗುವುದು ಬೇಡ| ನೇರ ಬಾಳಲಿ ನೇರ ನಡೆ, ಸುಂದರ ಬಾಳು ನಿನಗಿದೆ| ನಾನಲ್ಲ ನಿನಗೆ ತಕ್ಕವ, ದೇವರಂಥವ ಸಿಗಲಿ ನಿನಗೆ| ನಿನ್ನ ಒಳಿತನೆ ಹಾರೈಸುತಿರುವೆ, ನಿನ್ನ ನೆನಪಲೆ ನನ್ನೀ ಬಾಳಕಳೆವೆ|
ಅನುರಾಧಾ ಬಳಿ ಕೇಳಿದ್ದೆ, "ಏನಾಯಿತು ಅನೂ, ಯಾಕೆ ಹೀಗೆಲ್ಲ ಆಯ್ತು? ಬುದ್ಧಿವಂತೆ ಎನಿಸಿಕೊಂಡ ನೀನೇ ಹೀಗೆ ತಪ್ಪು ಹೆಜ್ಜೆ ಇಡಬಹುದಾ?"
ಅನೂ ಕಣ್ಣಾಲಿಗಳಲ್ಲಿ ನೀರು ತುಂಬಿಕೊಂಡೇ ಉತ್ತರಿಸಿದ್ದಳು. "ಯಾವುದು ತಪ್ಪಾಗಿತ್ತು ಹೇಮಾ? ರಫಿಯನ್ನು ನನ್ನ ಹಾಗೇ ಸಂವೇದನೆಗಳಿರುವ ಮನುಷ್ಯ ಎಂದು ಪ್ರೀತಿಸಿದ್ದೆ? ಹಿರಿಯರು ಈ ಮದುವೆಗೆ ಎಂದೂ ಒಪ್ಪಲಾರರು ಎಂದು ತಿಳಿದು ನಾವು ಊರು ಬಿಟ್ಟು ಹೋಗಿದ್ದೆ? ಕನ್ನಡಿಯೊಳಗೆ ಕಂಡ ಬದುಕಿನ ಕನಸು ಕೈಗೆ ಸಿಗದೆ ಚೂರುಚೂರಾದ ಮೇಲೂ ಆತ್ಮಹತ್ಯೆ ಮಾಡಿಕೊಳ್ಳದೆ ಬದುಕಿದ್ದೆ? ಮತ್ತೆ ಊರಿಗೇ ಬಂದು ‘ಇಂಥವರೂ ಬದುಕುವ ಧೈರ್ಯ ಮಾಡುತ್ತಾರಲ್ಲ’ ಎಂದು ದಿನಬೆಳಗಾದರೆ ಚುಚ್ಚಿಚುಚ್ಚಿ ಕೊಲ್ಲುತ್ತಿರುವ ಜನರೊಂದಿಗೆ, ಒಡಹುಟ್ಟಿದವರೊಂದಿಗೇ ಎದೆ ಸೆಟೆಸಿ, ತಲೆಯೆತ್ತಿ ಬದುಕುತ್ತಿರುವುದೆ?"
ಆಗೆಲ್ಲ ಅನೂ ಪ್ರತಿದಿನ ಬರುತ್ತಿದ್ದಳು ನಮ್ಮ ಮನೆಗೆ. ಆದರೆ ಲೆಕ್ಕ ಹಾಕಿ ಒಂದೂವರೆ ತಿಂಗಳಷ್ಟೇ. ಊರಿನಲ್ಲಿ ಗುಸುಗುಸು ಹಬ್ಬಿ ಅದರ ಅಸಹ್ಯ ನಾತ ಮಿತಿಮೀರಿದಾಗ ಯಾಕೋ ತಡೆಯಲಾರದೆ ಅನೂ ಬಳಿ ಹೇಳಿದ್ದೇ ತಪ್ಪಾಯಿತು. ನಿನ್ನ ಹೆಸರು ಹಾಳಾಗಬಾರದೆಂದು ಹೇಳಿದೆ ಅನೂ ಎಂದರೆ "ನನ್ನ ಹೆಸರು ಹಾಳಾಗುವುದಕ್ಕೆ ಇನ್ನೇನು ತಾನೆ ಉಳಿದಿದೆ ಹೇಮಾ? ನನಗೆ ಅರ್ಥವಾಗುತ್ತದೆ ಬಿಡು. ನಿನ್ನ ಮನೆಯಲ್ಲೂ ಮೂವರು ಹೆಮ್ಮಕ್ಕಳಿದ್ದಾರೆ ಅಲ್ವ? ನನ್ನ ಕ್ಷಮಿಸು ಹೇಮಾ..."
ಅನೂಗೆ ನನ್ನ ಅಂತರಂಗವನ್ನು ಎಳೆ ಎಳೆಯಾಗಿ ಬಿಡಿಸಿ ಹೇಳುವುದು ಸಾಧ್ಯವಿತ್ತೆ? ಅವಳಿಗದು ನಿಜಕ್ಕೂ ಅರ್ಥವಾಗಿರಲಿಲ್ಲವೆ?
ಅಂತೂ ಅನು ಆನಂತರ ಹದಿನೈದು ಇಪ್ಪತ್ತು ದಿನಗಳಿಗೊಮ್ಮೆ ಬರತೊಡಗಿದಳು. ಚಿಕ್ಕಮ್ಮನಿಗೆ ಅನೂ ಬಂದು ಹೋಗುವುದು ಹಿಡಿಸುತ್ತಿರಲಿಲ್ಲ. ಇದು ಅನೂ ಅರಿವಿಗೆ ಬರುವ ಮಟ್ಟಕ್ಕೂ ಹೋಗಿತ್ತು. ಅನೂ ಎಲ್ಲಿ ಬರುವುದನ್ನೆ ನಿಲ್ಲಿಸಿಬಿಡುತ್ತಾಳೋ ಎಂಬ ಭಯದೊಂದಿಗೇ ಅಂದು ಅದೊಂದು ಪ್ರಶ್ನೆ ಕೇಳಿದ್ದೆ. ಎಷ್ಟು ಕಷ್ಟವಾಗಿತ್ತು ನನಗೆ! ಅನೂ ನನ್ನನ್ನು ಮದುವೆಯಾಗುವ ಬಗ್ಗೆ ನಿಜಕ್ಕಾದರೆ ಯೋಚಿಸಿದ್ದಳೆ? ಯಾರಿಗೆ ಗೊತ್ತು, ಅವಳು ಉತ್ತರ ನೀಡಲಿಲ್ಲ.
ಇದೆಲ್ಲ ನನ್ನೊಳಗೆ ತುಂಬುತ್ತಿದ್ದ ಸಂಕಟ, ನೀಡುತ್ತಿದ್ದ ಹಿಂಸೆಯ ಅರಿವು ಯಾರಿಗೂ ಇರಲಿಲ್ಲ.ನಾನಾಗಿ ಹೇಳಿಕೊಳ್ಳುವಂತೆಯೂ ಇರಲಿಲ್ಲ. ಅಷ್ಟರಲ್ಲಿ ಜಾನಕಿ ಗಂಡನೊಂದಿಗೆ ಮುನಿಸಿಕೊಂಡು ತವರಿಗೆ ಬಂದು ಕೂತಳು. ವಿವೇಕಿಯಾದ ಗಂಡನೇ ಸಿಕ್ಕಿದ್ದ ಅವಳ ಪುಣ್ಯಕ್ಕೆ. ಆದರೆ ಅತ್ತೆ-ಮಾವ ಸ್ವಲ್ಪ ಮಡಿವಂತರು. ನನ್ನ ಭಾವ ಅವರ ಒಬ್ಬನೇ ಮಗ ಬೇರೆ. ನಾನು ಎರಡು ಮೂರು ಬಾರಿ ಅವಳ ಮನೆಗೆ ಓಡಾಡಬೇಕಾಯಿತು.
ಆಗೊಮ್ಮೆ ಜಾನಕಿ ನನ್ನ ಬಳಿ ಹೇಳಿದ್ದಳು. "ಅಣ್ಣಾ ಅನೂನ ಆ ಮನೆಯಲ್ಲಿ ಬಿಟ್ಟು ತಪ್ಪು ಮಾಡಿದೆಯೊ ಏನೋ. ಅಲ್ಲಿ ಅವಳು ದಿನಾ ಚೂರುಚೂರೇ ಸಾಯ್ತಿದ್ದಾಳೆ ಅಣ್ಣ. ಜನ ಬೇರೆ ನಮ್ಮ ಮಾವನೇ ಕುತಂತ್ರ ಮಾಡಿ ನಮ್ಮ ಜಾಗ ಮಾರಿಸಿದ ಹಾಗೆ ರಫಿಯ ವಿಷಯದಲ್ಲೂ ಏನೋ ಮಾಡಿದ್ದಾನೆ ಅಂತೆಲ್ಲ ಆಡಿಕೊಳ್ತಿದ್ದಾರೆ. ಏನಣ್ಣಾ ಇದೆಲ್ಲ" ಎಂದಿದ್ದಳು. "ಅಲ್ಲಾ ಜಾನು, ನಾನಿನ್ನು ಏನು ತಾನೆ ಮಾಡಬಹುದಿತ್ತು ಹೇಳು ಮಾರಾಯ್ತಿ" ಎಂದರೆ ಮೌನಿಯಾದಳು.
ಮತ್ತೆ ಗಂಡನ ಮನೆಗೆ ಹೊರಟು ನಿಂತಾಗ ಹೇಳಿದ್ದಳು. "ಈ ಗಂಡು ಜಾತಿ ಯಾವಾಗಲೂ ಹೆಣ್ಣು ಬೇರೊಂದು ಗಂಡಿನ ಛಾಯೆಯಷ್ಟೇ ಆಗಿರಬೇಕಂತ ಬಯಸುತ್ತೆ ಹೇಮಾ. ಅಪ್ಪ, ಗಂಡ, ಅಣ್ಣ ಎಲ್ಲರೂ. ನೀನು ನಮಗೆ ನಮ್ಮದೇ ವ್ಯಕ್ತಿತ್ವ ಬೆಳೆಸಿಕೊಂಡು ಬದುಕಲು ಬಿಟ್ಟೆ. ಅದರ ಸಾಧಕ ಬಾಧಕಗಳ ಹೊಣೆ ನಮ್ಮದೇ. ನೀನು ನಿನ್ನ ಭಾವನ ಕೈಕಾಲು ಹಿಡಿಯುವ ಹಾಗೆ ಮಾಡಿದ್ದಕ್ಕೆ ಕ್ಷಮಿಸು."
"ನಿನಗೆ ಗೊತ್ತಾ ಜಾನು, ಭಾವ ನಿನ್ನ ತುಂಬ ಪ್ರೀತಿಸ್ತಿರೋದು ನೀನು ಸ್ವಂತ ವ್ಯಕ್ತಿತ್ವ ಇರೊ ಸ್ವತಂತ್ರ ಹೆಣ್ಣಾಗಿರೋದಕ್ಕೇನೇ. ಅಂಥ ಹೆಣ್ಣೆಂದರೆ ಗಂಡಿಗೆ ವಿಚಿತ್ರ ಆಕರ್ಷಣೆ ಕೂಡಾ ಇರುತ್ತೆ ಜಾನು..."
ತುಂಬ ಹೊತ್ತಿನ ಮೌನದ ನಂತರ ಜಾನಕಿ ಮೆಲ್ಲನೆ ಹೇಳಲೋ ಬೇಡವೋ ಎಂಬಂತೆ ಹೇಳಿದ್ದಳು. "ಆಕರ್ಷಣೆಯೇನೋ ಇರುತ್ತೆ, ಅದರ ಅಗತ್ಯನೂ ತಾತ್ಕಾಲಿಕ. ಅಂಥವಳನ್ನು ತಮ್ಮ ಬದುಕಿಗೆ ಸ್ವೀಕರಿಸುವವರು ಅವಳಲ್ಲಿ ಆನಂತರ ಬದಲಾವಣೇನ ಬಯಸ್ತಾರೆ ಅಣ್ಣಾ. ನನ್ನ ಹಾಗೇ ಅವಳದ್ದೂ ಸ್ವತಂತ್ರ ವ್ಯಕ್ತಿತ್ವವಾಗಿತ್ತು. ಆದರೆ ಅದೇ ಅವಳ ಬದುಕನ್ನು ಸಜೀವ ದಹಿಸುವ ಚಿತೆಯಾಗಿಸಿಬಿಟ್ಟಿತು ನೋಡು. ಆ ಎಳೆಯ ಜೀವ ಹೀಗೇ ಕಣ್ಣೆದುರೇ ನಾಶವಾಗುತ್ತಿರುವಾಗ ನಾವೇನೂ ಮಾಡಲಾರದ ಅಸಹಾಯಕರಾಗಿ ಬಿಟ್ಟೆವಾ ಅಣ್ಣ? ಪಾಪ ಅವಳನ್ನು ಯಾರೂ ಅರ್ಥಮಾಡಿಕೊಳ್ಳಲಿಲ್ಲ ಅಣ್ಣಾ" ಎಂದು ಕಣ್ಣೊರೆಸಿಕೊಂಡಳು.
ಆಗಲ್ಲವೆ ನಾನು ಆ ಪತ್ರ ಬರೆದಿದ್ದು?
Either mean or Extream ಎಂದರೇನು? ನನ್ನ ಪ್ರೀತಿ ಯಾಕೆ mean? ಅಲ್ಲಾಂದರೆ ಅದು extream ಕೂಡಾ ಯಾಕೆ!
ಬಂದು ನಿಂತಿದ್ದು ಅಲ್ಲಿಗೇ, ಹೆಳವನ ಹಾದಿಯೊಳು.....
ಆರಂಭ
ಚಿತೆ ಹತ್ತಿಕೊಂಡು ಉರಿಯ ತೊಡಗಿತ್ತು. ಸ್ಟವ್ ಸಿಡಿದೇ ಆಗಿದ್ದೊ, ಸುಟ್ಟುಕೊಂಡು ಸತ್ತಳೋ, ಇವರೇ ಕೊಂದರೋ. ಮುಸಲ್ಮಾನನೊಂದಿಗೆ ಓಡಿ ಹೋದವಳಿಗೆ ಸೂತಕ ಹಿಡಿಯಬೇಕೋ, ಮದುವೆ ಎಂಬುದು ಆಗಿತ್ತೆ, ಅದು ಲೆಕ್ಕಕ್ಕುಂಟೆ ಎಂದೆಲ್ಲ ತಲೆಕೆಡಿಸಿಕೊಂಡು ಗಂಭೀರವಾಗಿ ಗುಜುಗುಜು ಚರ್ಚಿಸುತ್ತಿದ್ದ ಜನರೆಲ್ಲ ಸರಿದು ಹೋಗಿ ತುಂಬ ಹೊತ್ತಾಗಿತ್ತು.
ಹೂವಿನಂಥ ಹೃದಯದ ಹುಡುಗರ ಎದೆ ಹೂವು ಬಾಡುವ ಮುಸ್ಸಂಜೆ ಹೊತ್ತು ಜೀವದೊಳಗಿನ ಕಡಲು ಅಶಾಂತಿಯಿಂದ ಮೊರೆಯತೊಡಗಿತ್ತು.....ಅನೂ....ಅನೂ.....ಅನೂ......
(ಉದಯವಾಣಿ ಸಾಪ್ತಾಹಿಕ ಪುರವಣಿಯಲ್ಲಿ ದಿನಾಂಕ 17/10/1999 ರಂದು ಪ್ರಕಟವಾದ ನನ್ನ ನಾಲ್ಕನೆಯ ಕತೆ)
No comments:
Post a Comment